ಶ್ರೀನಗರ: ಪುಲ್ವಾಮಾದಲ್ಲಿ ಸಿಆರ್’ಪಿಎಫ್ ಕಾನ್ವೆ ಮೇಲೆ ನಡೆದ ಭೀಕರ ದಾಳಿಯ ಮಾದರಿಯಲ್ಲೇ ಮುಂದಿನ 3-4 ದಿನಗಳಲ್ಲಿ ಯೋಧರ ಮೇಲೆ ಮತ್ತೊಂದು ಭೀಕರ ದಾಳಿ ನಡೆಯುವ ಸಾಧ್ಯತೆ ಹೆಚ್ಚಾಗಿದೆ ಎಂದು ಗುಪ್ತಚರ ಇಲಾಖೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದೆ.
ಈ ಕುರಿತಂತೆ ಉನ್ನತ ಮೂಲಗಳ ಮಾಹಿತಿಯಂತೆ ವರದಿಯಾಗಿದ್ದು, ಜೈಷ್ ಉಗ್ರ ಸಂಘಟನೆ ಅತಿ ಶೀಘ್ರದಲ್ಲೇ ಮತ್ತೊಂದು ಭೀಕರ ದಾಳಿಗೆ ಸಜ್ಜಾಗಿದೆ. ಭಾರತೀಯ ವಾಯುಸೇನೆ ಬಾಲಾಕೋಟ್ ಮೇಲೆ ಅತಿದೊಡ್ಡ ದಾಳಿ ನಡೆಸಿ, ಉಗ್ರರ ತರಬೇತಿ ಶಿಬಿರವನ್ನು ನಾಶ ಮಾಡಿದ ಹಿನ್ನೆಲೆಯಲ್ಲಿ ಜಮ್ಮು ಕಾಶ್ಮೀರದಲ್ಲಿ ಸೇಡು ತೀರಿಸಿಕೊಳ್ಳಲು ಜೈಷ್ ಸಜ್ಜಾಗಿದೆ ಎಂದು ವರದಿಯಾಗಿದೆ.
ಸೂಕ್ಷ್ಮ ವರದಿಯಂತೆ ದಕ್ಷಿಣ ಕಾಶ್ಮೀರದ ಕ್ವಾಜಿಗುಂಡ್ ಹಾಗೂ ಅನಂತನಾಗ್ ಪ್ರದೇಶಗಳಲ್ಲಿ ದಾಳಿ ನಡೆಸಲು ಜೈಷ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಜರ್ ಸಂಚು ರೂಪಿಸಿದ್ದಾನೆ ಎನ್ನಲಾಗಿದೆ. ದಾಳಿಗೆ ಹಿಂದಿಗಿಂತಲೂ ಭಾರೀ ಪ್ರಮಾಣದಲ್ಲಿ ಐಇಡಿ ಬಳಕೆ ಮಾಡಲು ಆತ ನಿರ್ಧರಿಸಿದ್ದು, ಇದಕ್ಕಾಗಿ ಟಾಟಾ ಸುಮೋ ಎಸ್’ಯುವಿ ವಾಹನ ಬಳಕೆ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಗುಪ್ತಚರ ಇಲಾಖೆಯ ಮಾಹಿತಿ ಹಿನ್ನೆಲೆಯಲ್ಲಿ ಕಣಿವೆ ರಾಜ್ಯದಾದ್ಯಂತ ನಿನ್ನೆ ರಾತ್ರಿಯಿಂದಲೇ ಭದ್ರತೆ ಹೆಚ್ಚಿಸಲಾಗಿದ್ದು, ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.
ನಿನ್ನೆಯಷ್ಟೇ ಜಮ್ಮು ಬಸ್ ನಿಲ್ದಾಣದಲ್ಲಿ ಗ್ರೆನೇಡ್ ದಾಳಿ ನಡೆದು ಓರ್ವ ನಾಗರಿಕ ಸಾವನ್ನಪ್ಪಿದ್ದು 28ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗ್ರೆನೇಡ್ ದಾಳಿ ನಡೆಸಿದ ಬೆನ್ನಲ್ಲೇ, ಜೈಷ್ ಉಗ್ರ ಸಂಘಟನೆಯ ಸದಸ್ಯನೊಬ್ಬನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಲಾಗಿದೆ.
Discussion about this post