ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿಗೆ ಸಮೀಪದ ಕೂಡ್ಲಿಗೆರೆ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಕರಡಿ ದಾಳಿ ನಡೆಸಿದ್ದು, ಅವರಿಗೆ ಪರಚಿದ ಗಾಯಗಳಾಗಿರುವ ಘಟನೆ ನಡೆದಿದೆ.
ಗಾಯಾಳುವನ್ನು ಗ್ರಾಮದ ಮೋಹನ್(36) ಎಂದು ಗುರುತಿಸಲಾಗಿದೆ.
ಗ್ರಾಮದ ಒಳಗೇ ಇರುವ ತಮ್ಮ ಕೃಷಿ ಸಾಮಾನು ಸರಂಜಾಮು ಸಂಗ್ರಹ ಮಾಡಿರುವ ಹೊಸ ಮನೆಯಲ್ಲಿ ರಾತ್ರಿ ವೇಳೆ ಸಾಮಾನ್ಯವಾಗಿ ಈ ಕುಟುಂಬಸ್ಥರು ಮಲಗುತ್ತಾರೆ. ಎಂದಿನಂತೆ ನಿನ್ನೆ ರಾತ್ರಿ 11.30ರ ವೇಳೆಯೂ ಸಹ ಮೋಹನ್ ತಮ್ಮ ಈ ಮನೆಗೆ ಬಂದಿದ್ದಾರೆ. ಆದರೆ, ಈ ಮುನ್ನವೇ ಮನೆಯೊಳಗೆ ಸೇರಿಕೊಂಡಿದ್ದ ಕರಡಿ ಏಕಾಏಕಿ ಮೋಹನ್ ಮೇಲೆ ದಾಳಿ ನಡೆಸಿದೆ.
Also read: ವೈದ್ಯರ ಸುರಕ್ಷತೆಗಾಗಿ ಶೀಘ್ರ ಕೇಂದ್ರ ರಕ್ಷಣಾ ಕಾಯ್ದೆ ಜಾರಿಗೊಳಿಸಿ: ಡಾ. ಸಿದ್ಧಲಿಂಗಪ್ಪ
ಕರಡಿ ದಾಳಿಯಿಂದ ಗಾಬರಿಯಾದರೂ ಹೆದರದ ಮೋಹನ್, ಅದರೊಂದಿಗೆ ಸೆಣೆಸಾಡಿದ್ದಾರೆ. ಛಲಬಿಡದೇ ಕರಡಿಯೊಂದಿಗೆ ಹೋರಾಡಿದ್ದು, ಅದನ್ನು ಎತ್ತಿ ಬಿಸಾಡಿದ್ದಾರೆ. ಇದರಿಂದ ಹೆದರಿದ ಕರಡಿ ಅರಣ್ಯ ಪ್ರದೇಶದ ಕಡೆ ಓಡಿಹೋಗಿದೆ.
ಕರಡಿಯೊಂದಿಗೆ ಹೋರಾಡುವ ವೇಳೆ ಮೋಹನ್ ಅವರ ಬೆನ್ನು ಹಾಗೂ ಕೈಗೆ ಪರಚಿದ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.
ಬಾರದ ಅರಣ್ಯಾಧಿಕಾರಿಗಳು, ಜನರ ಆಕ್ರೋಶ
ಗ್ರಾಮದ ಒಳಭಾಗದಲ್ಲಿಯೇ ಕರಡಿ ಕಾಣಿಸಿಕೊಂಡು ಓರ್ವರ ಮೇಲೆ ದಾಳಿ ಮಾಡಿದೆ ಎಂದು ಸ್ಥಳೀಯ ಹಾಗೂ ತಾಲೂಕು ಅರಣ್ಯಾಧಿಕಾರಿಗಳಿಗೆ ಇಂದು ಮುಂಜಾನೆಯೇ ಮಾಹಿತಿ ನೀಡಿದರೂ ಸಹ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಲ್ಪ ನ್ಯೂಸ್ ಜೊತೆಯಲ್ಲಿ ಮಾತನಾಡಿದ ರೈತ ಸಂಘದ ಹಸಿರುಸೇನೆ ಕಾರ್ಯದರ್ಶಿ ಮೋಹನ್ ಅವರು, ಘಟನೆ ಕುರಿತಂತೆ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ ಸ್ಥಳಕ್ಕೆ ಭೇಟಿ ನೀಡಿಲ್ಲ. ಇದು ಗ್ರಾಮೀಣ ಪ್ರದೇಶವಾದ ಕಾರಣ ತೋಟಗಳಿಗೆ ತೆರಳುವ ಮಂದಿ ಸದಾ ಕಾಲ ಇದ್ದೇ ಇರುತ್ತಾರೆ. ಘಟನೆಯಿಂದ ಗ್ರಾಮಸ್ಥರು ತೋಟಗಳಿಗೆ ಹಾಗೂ ಹೊರಕ್ಕೆ ತೆರಳಲು ಹೆದರುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಗ್ರಾಮದ ಪ್ರಮುಖರಾದ ರವಿಶಂಕರ್ ಮಾತನಾಡಿ, ಈ ಹಿಂದೆಯೂ ಸಹ ಹಲವು ಬಾರಿ ತೋಟ ಹಾಗೂ ಗ್ರಾಮದ ಹೊರವಲಯದಲ್ಲಿ ಕಾಣಿಸಿಕೊಂಡಿತ್ತು. ಆದರೆ, ಇದೇ ಮೊದಲ ಬಾರಿ ಗ್ರಾಮ ಒಳಗೆ ಬಂದು ಒಂದು ಮನೆಯೊಳಗೆ ಸೇರಿಕೊಂಡಿದೆ. ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಅರಣ್ಯಾಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post