ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೆರೆಗಳ ಸಂರಕ್ಷಣೆಗೆ ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಕರೆಯುವಂತೆ ತಹಶೀಲ್ದಾರ್ ಅವರಿಗೆ ಸೂಚಿಸುವಂತೆ ಕೋರಿ ಶಾಸಕ ಬಿ.ಕೆ.ಸಂಗಮೇಶ್ವರ್ ಅವರಿಗೆ ಭಾರತ ರತ್ನ ಸರ್.ಎಂ.ವಿಶ್ವೇಶ್ವರಯ್ಯ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಆರ್.ವೇಣುಗೋಪಾಲ್ ಮನವಿ ಸಲ್ಲಿಸಿದರು.
ತಾಲೂಕಿನಲ್ಲಿ ನೂರಾರು ಕೆರೆಗಳಿದ್ದು, ಅಂತರ್ಜಲ ಹೆಚ್ಚಿಸಿ ಪ್ರಾಣಿ-ಪಕ್ಷಿ, ಜಾನುವಾರು ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಸದರಿ ಕೆರೆಗಳ ಸಮೀಪವಿರುವ ರೈತರು ಸರಕಾರದಿಂದ ಯಾವುದೇ ಫಲಾಪೇಕ್ಷೆ ನಿರೀಕ್ಷಿಸದೆ ಸ್ವಇಚ್ಚೆಯಿಂದ ಕೆರೆಗಳನ್ನು ಸಂರಕ್ಷಿಸಿ ಅಭಿವೃದ್ದಿ ಪಡಿಸಲು ನಿರ್ಧರಿಸಿದ್ದರು. ಕೆರೆಗಳ ಸ್ವಚ್ಚತೆಗೆ ಹಿಂದಿನ ಪೌರಾಯುಕ್ತರ ಬಳಿ ಅನೇಕ ರೈತರು ಮಾತುಕತೆ ನಡೆಸಿದ್ದರು. ಮೂರ್‍ನಾಲ್ಕು ಕೆರೆಗಳು ಸಹ ಸ್ವಚ್ಚತೆಗೊಂಡಿದ್ದವು ಎಂದು ಮನವಿಯಲ್ಲಿ ತಿಳಿಸಲಾಗಿದೆ.

ಮುಂಬರುವ ಮಾರ್ಚ್ 2022ನೆಯ ಸಾಲಿನಲ್ಲಿ ವಿಶ್ವಜಲ ದಿನಾಚರಣೆ ಅಂಗವಾಗಿ ರೈತರು ಕೆರೆಗಳ ಹಬ್ಬ ಆಚರಿಸಲಿದ್ದಾರೆ. ಆದ್ದರಿಂದ ಶಾಸಕರು ಉಪವಿಭಾಗಾಧಿಕಾರಿಗಳ ನೇತೃತ್ವದಲ್ಲಿ ತಹಶೀಲ್ದಾರ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕಾಧಿಕಾರಿ, ನೀರಾವರಿ ಇಲಾಖೆ, ರಕ್ಷಣಾ ಇಲಾಖೆ, ಮೀನುಗಾರಿಕಾ ಇಲಾಖೆ, ನಗರಾಭಿವೃದ್ದಿ ಪ್ರಾಧಿಕಾರ, ನಗರಸಭೆ ಅಧಿಕಾರಿಗಳ ತುರ್ತು ಸಭೆ ಕರೆದು ಕೆರೆಗಳ ಸಂರಕ್ಷಣೆ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ತಾಲೂಕು ಆಡಳಿತಕ್ಕೆ ಸೂಚಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮೊಹಹ್ಮದ್ ಆರಿಫ್, ಆರ್. ಮುರುಗೇಶ್, ನಗರಸಭಾ ಸದಸ್ಯ ಚೆನ್ನಪ್ಪ ಮುಂತಾದವರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















