ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್‌ಎಲ್ ಕಾರ್ಖಾನೆಯನ್ನು ಮುಚ್ಚುವ ನಿರ್ಧಾರ ಕೈಬಿಟ್ಟು ಬಂಡವಾಳ ತೊಡಗಿಸಿ ಕಾರ್ಖಾನೆಯನ್ನು ಪುನಶ್ಚೇತನಗೊಳಿಸಬೇಕೆಂದು ಆಗ್ರಹಿಸಿ ಕಾರ್ಖಾನೆಯ ಸಂಘಟನೆ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭದ್ರಾವತಿ ಬಂದ್ ಸಂಪೂರ್ಣ ಯಶಸ್ವಿಯಾಯಿತು.
ನಗರದ ಜೀವನಾಡಿಯಾಗಿರುವ ಕಾರ್ಖಾನೆಯ ಉಳಿವಿಗಾಗಿ ಕರೆ ನೀಡಿದ್ದ ಭದ್ರಾವತಿ ಬಂದ್ ಗೆ ಬಹುತೇಕ ವ್ಯಾಪಾರಸ್ಥರು ಸ್ವಯಂಪ್ರೇರಿತರಾಗಿ ಬೆಂಬಲ ನೀಡಿದ್ದರು.

ವಿಐಎಸ್‌ಎಲ್‌ನ ಅಪಾರ ಕಾರ್ಮಿಕರ ಜೀವನ ನಿರ್ವಹಣೆಗೆ ಕಾರಣವಾಗಿದ್ದ ಈ ಕಾರ್ಖಾನೆ ದೇಶದ ಪ್ರಗತಿಗೆ ತನ್ನದೇ ಆದ ಕೊಡುಗೆ ನೀಡಿದೆ. 100 ವರ್ಷಗಳ ಇತಿಹಾಸ ಹೊಂದಿರುವ ರಾಜ್ಯದ ಹೆಮ್ಮೆಯ ಆಸ್ತಿಯನ್ನು ತನ್ನ ನೀತಿಯ ಹೊರತಾಗಿಯೂ ಈಗಿನ ತಂತ್ರಜ್ಞಾನ ಬಳಸಿ ಆಧುನೀಕರಣಗೊಳಿಸಿ ಮುಂದಿನ ಪೀಳಿಗೆಗೆ ಉಳಿಸಿಕೊಳ್ಳುವುದು ಕೇಂದ್ರ ಸರ್ಕಾರದ ಜವಾಬ್ದಾರಿಯಾಗಿದೆ. ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಹೆಚ್ಚಿನ ಬಂಡವಾಳ ತೊಡಗಿಸಿ ಸರ್ಕಾರಿ ಸ್ವಾಮ್ಯದಲ್ಲೇ ಮುಂದುವರೆಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಬಂದ್ ಗೆ ಸ್ವಯಂಪ್ರೇರಿತಾಗಿ ವ್ಯಾಪಾರಸ್ಥರು ಬೆಂಬಲ ನೀಡಿದ್ದ ಹಿನ್ನಲೆಯಲ್ಲಿ ಬೆಳಗ್ಗೆಯಿಂದಲೇ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಅಲ್ಲದೇ, ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತ ಬಂದ್ ಮಾಡಿದ ಹಿನ್ನಲೆಯಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿತ್ತು. ಇದರ ಬಿಸಿ ಸಾರ್ವಜನಿಕರಿಗೆ ತಟ್ಟಿತ್ತು. ಬಸ್, ಆಟೋ ಸಂಚಾರ ನಗರದಲ್ಲಿ ಕಂಡುಬರಲಿಲ್ಲ. ಶಾಲಾ, ಕಾಲೇಜ್ ಗಳನ್ನು ಬಂದ್ ಮಾಡಲಾಗಿತ್ತು. ಕಚೇರಿಗಳಲ್ಲಿ ಜನಸಂದಣಿ ಇರಲಿಲ್ಲ. ಬಂದ್ ಗೆ ವಕೀಲರು ಬೆಂಬಲಿಸಿ ಕಲಾಪದಿಂದ ದೂರ ಉಳಿದಿದ್ದರು. ಆಸ್ಪತ್ರೆ, ಮೆಡಿಕಲ್ ಶಾಪ್, ತುರ್ತು ಸೇವೆಗಳು ಮಾತ್ರ ಲಭ್ಯವಾಗಿತ್ತು. ಅಲ್ಲದೆ ನಗರ ವ್ಯಾಪ್ತಿಯ ಎಲ್ಲಾ ಬ್ಯಾಂಕುಗಳು ತೆರೆದಿದ್ದರೂ ಗ್ರಾಹಕರಿಲ್ಲದೆ ಬಣಗುಡುತ್ತಿದ್ದವು. ಬೈಪಾಸ್ ರಸ್ತೆಯಲ್ಲಿ ನಗರ ಸಂಪರ್ಕಿಸಲು ನಿರ್ಬಂಧ ಹೇರಿದ್ದರಿಂದ ನಗರ ವ್ಯಾಪ್ತಿಯಲ್ಲಿ ಸರ್ಕಾರಿ, ಖಾಸಗಿ, ನಗರಸಾರಿಗೆ ಹಾಗೂ ರಸ್ತೆ ಸಂಚಾರ ಇರಲಿಲ್ಲ.
ವಿಐಎಸ್‌ಎಲ್ ಗೇಟ್ ಮುಂಭಾಗದಿಂದ ಅಂಬೇಡ್ಕರ್ ವೃತ್ತ, ಬಿ.ಹೆಚ್. ರಸ್ತೆ, ರಂಗಪ್ಪ ವೃತ್ತದ ಮೂಲಕ ತಾಲೂಕು ಕಚೇರಿವರೆಗೆ ಪ್ರತಿಭಟನಾಕಾರರು ಮೆರವಣಿಗೆ ನಡೆಸಿ ಮನವಿ ಸಲ್ಲಿಸಿದರು.
Also read: ಮಾ.1-3ರವರೆಗೆ ಅ.ಪ. ರಾಮ ಭಟ್ಟರ ಸ್ವರಣಾರ್ಥ ಭಗವದ್ಗೀತಾ ಭಕ್ತಿಯೋಗ ಉಪನ್ಯಾಸ ಕಾರ್ಯಕ್ರಮ

ಪ್ರತಿಭಟನೆಯಲ್ಲಿ ಕಾರ್ಖಾನೆಯ ಕಾರ್ಮಿಕರ ಸಂಘದ ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ರಾಕೇಶ್, ಶಾಸಕ ಸಂಗಮೇಶ್, ಜೆಡಿಎಸ್ ಮುಖಂಡೆ ಶಾರದಾ ಅಪ್ಪಾಜಿ, ರೈತ ಮುಖಂಡ ಕೆ.ಟಿ. ಗಂಗಾಧರ್, ಕಾಂಗ್ರೆಸ್ ಮುಖಂಡ ಎನ್. ರಮೇಶ್ ಮೊದಲಾದವರಿದ್ದರು.














Discussion about this post