ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಜ್ಯ ಸರ್ಕಾರ ಜಾರಿಗೆ ತರಲು ತಯಾರಾಗಿರುವ ಮತಾಂತರ ನಿಷೇಧ ಕಾಯ್ದೆಯನ್ನು ಕೈಬಿಡಬೇಕು ಹಾಗೂ ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಧಾರ್ಮಿಕ ಸಂಘ ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂಬ ಸರ್ಕಾರದ ಆದೇಶವನ್ನು ಕೂಡಲೇ ಹಿಂಪಡೆಯಬೇಕೆಂದು ಅಖಿಲ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯೂಮನ್ ರೈಟ್ಸ್ ವತಿಯಿಂದ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಮತಾಂತರದ ಕುರಿತ ಚರ್ಚೆ ಬಹಳ ಬಿರುಸಿನಿಂದ ಇತ್ತೀಚೆಗೆ ನಡೆಯುತ್ತಿದೆ. ಸರ್ಕಾರವು ಮತಾಂತರ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಲು ಚಿಂತನೆ ನಡೆಸುತ್ತಿದೆ. ಇದಕ್ಕೆ ಕರ್ನಾಟಕದ ಸಮಸ್ತ ಕ್ರೈಸ್ತ ಸಮುದಾಯವು ಒಮ್ಮನಸಿನಿಂದ ವಿರೋಧಿಸುತ್ತದೆ. ಈಗಾಗಲೇ ನಮ್ಮ ಸಂವಿಧಾನವು ತನ್ನ ಪ್ರಜೆಗಳಿಗೆ ಯಾವುದೇ ಧರ್ಮವನ್ನು ಪ್ರತಿಪಾದಿಸಲು, ಆಚರಿಸಲು ಮತ್ತು ಅದನ್ನು ಪ್ರಕಟಿಸಲು ಹಕ್ಕುಗಳನ್ನು ನೀಡಿದೆ. ಹೀಗಿರುವಲ್ಲಿ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆಯ ಅಗತ್ಯವಾದರೂ ಏನು? ಯಾವುದೋ ಒಂದೆರಡು ಘಟನೆಗಳನ್ನು ಆಧಾರವಾಗಿಟ್ಟುಕೊಂಡು, ಇಡೀ ಕ್ರೈಸ್ತ ಸಮುದಾಯವನ್ನು ದೂರುವುದು ಸರಿಯಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಇನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ತನ್ನ ಸಭೆಯೊಂದರಲ್ಲಿ ರಾಜ್ಯದಲ್ಲಿ ಕ್ರೈಸ್ತ ಸಮುದಾಯದ ಚರ್ಚ್‌ಗಳ ಮತ್ತು ಧಾರ್ಮಿಕ ಸಂಘ-ಸಂಸ್ಥೆಗಳ ಗಣತಿಯನ್ನು ನಡೆಸಬೇಕೆಂದು ಆದೇಶಿಸಿದೆ. ಈ ಗಣತಿಯ ಉದ್ದೇಶವಾದರೂ ಏನು? ಸರ್ಕಾರವು ಗಣತಿ ಮಾಡಬೇಕೆಂದರೆ ಮಾಡಲಿ. ಆದರೆ ನಮ್ಮ ಆಕ್ಷೇಪಣೆ ಇಲ್ಲ. ಆದರೆ ನಮ್ಮ ಸಮುದಾಯವನ್ನು ಮಾತ್ರ ಗುರಿಯಾಗಿಸಿ ಗಣತಿಯನ್ನು ನಡೆಸಲು ಆದೇಶಿಸಿರುವುದೇಕೆ? ಅದಲ್ಲದೆ, ನಮ್ಮ ಚರ್ಚುಗಳ ವಿವರಗಳೆಲ್ಲವೂ ಈಗಾಗಲೇ ಸರ್ಕಾರದ ಬಳಿ ಇರುವಾಗ ಮತ್ತೊಮ್ಮೆ ಗಣತಿ ನಡೆಸುವ ಅಗತ್ಯವಾದರೂ ಏನು? ಪ್ರಶ್ನೆ ಮಾಡಿದೆ.
ಭಾರತದ ಮೊದಲ ಜನಗಣತಿಯಿಂದ ಇಲ್ಲಿಯವರೆಗೂ ಸಹ ದೇಶದಲ್ಲಿ ಕ್ರೈಸ್ತ ಸಮುದಾಯದ ಜನಸಂಖ್ಯೆ ಅಂಕಿ-ಅಂಶಗಳು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಬಳಿ ಇವೆ. ಭಾರತದಲ್ಲಿ ದೊಡ್ಡ ಮಟ್ಟಿಗೆ ಮತಾಂತರ ನಡೆಯುತ್ತಿದೆ ಎಂದು ಆರೋಪಿಸುವವರು ಈ ಅಂಕಿ-ಅಂಶಗಳನ್ನು ಒಮ್ಮೆ ಪರಿಶೀಲಿಸಿದರೆ ಎಲ್ಲರಿಗೂ ಸತ್ಯಾಂಶವು ಅರಿವಾಗುವುದು. ಮತಾಂತರವು ನಿಜವೇ ಆಗಿದ್ದರೆ, ನಮ್ಮ ಸಮುದಾಯದ ಸಂಖ್ಯೆ ಇಷ್ಟೊತ್ತಿಗೆ ಅಧಿಕವಾಗಿರಬೇಕಿತ್ತು. ಆದರೆ, ದೇಶದ ಸ್ವಾತಂತ್ರ್ಯದ ನಂತರವೂ ಸಹ ಜನಸಂಖ್ಯೆಯಲ್ಲಿ ನಮ್ಮ ಸಮುದಾಯದ ಸಂಖ್ಯೆ ಕೇವಲ ಶೇ.೮ರಷ್ಟು ಮಾತ್ರವಿದೆ ಎಂದು ತಿಳಿಸಲಾಗಿದೆ.
ಇಂದು ನಮ್ಮ ರಾಜ್ಯ ಹಾಗೂ ರಾಷ್ಟ್ರದಲ್ಲಿ ಕ್ರೈಸ್ತ ಸಮುದಾಯವು ಸಾವಿರಾರು ಶಾಲಾ ಕಾಲೇಜುಗಳ ಮತ್ತು ಆಸ್ಪತ್ರೆಗಳ ಮೂಲಕ ತನ್ನ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದೆ. ಇತಿಹಾಸದಲ್ಲಿ ಕ್ರೈಸ್ತ ಶಾಲಾ ಕಾಲೇಜುಗಳಲ್ಲಿ ಓದಿದವರು ಅಥವಾ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಂಡ ಕ್ರೈಸ್ತೇತರರಲ್ಲಿ ಯಾರಾದರೂ ಒಬ್ಬರು ತಮ್ಮನ್ನು ಮತಾಂತರಗೊಳಿಸಲಾಗಿದೆ ಎಂಬುದನ್ನು ಸಾಬೀತುಪಡಿಸಲಿ. ಈ ನಿಟ್ಟಿನಲ್ಲಿ ಮತಾಂತರ ನಿಷೇಧ ಕಾಯ್ದೆ ಎಂಬುದು ಜಾರಿಯಾದರೆ, ಅದು ಯಾವ ಒಳಿತನ್ನೂ ಮಾಡುವುದಿಲ್ಲ. ಬದಲಿಗೆ, ಸದರಿ ಕಾಯಿದೆ ಕೋಮುವಾದಿಗಳ ಕೈಗೆ ಸಿಕ್ಕಿದರೆ, ಅದನ್ನು ಅವರು ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯವೆಸಗಲು ಸಾಧ್ಯವಾಗಬಹುದು ಮತ್ತು ಆ ಮೂಲಕ ಸಮಾಜದಲ್ಲಿ ಶಾಂತಿಯನ್ನು ಕದಡಿಸಲು ಪ್ರಯತ್ನಿಸಬಹುದು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ಈ ಸಂದರ್ಭದಲ್ಲಿ ಫಾ. ಲಾನ್ಸಿ ಡಿಸೋಜ, ಫಾ. ಸ್ಟೀವನ್ ಡೇಸಾ, ಅಂತೋಣಿ ವಿಲ್ಸನ್, ಫಾ. ಸಂತೋಷ್ ಇರೇರಾ, ಫಾ. ವೀನಸ್ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news












Discussion about this post