ಭದ್ರಾವತಿ: ನಗರಸಭೆ ಹಾಗು ತಾಲೂಕು ಆಡಳಿತ ಹಮ್ಮಿಕೊಂಡಿರುವ ನಾಡಹಬ್ಬ ದಸರಾ ಆಚರಣೆಗೆ ಹಳೇನಗರದ ರಂಗಪ್ಪವೃತ್ತದಲ್ಲಿ ಬುಧವಾರ ನಾಡದೇವತೆ ಶ್ರೀ ಚಾಮುಂಡೇಶ್ವರಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ವಿದ್ಯುಕ್ತ ಚಾಲನೆ ನೀಡಲಾಯಿತು.
ತಹಸೀಲ್ದಾರ್ ಎಂ.ಆರ್.ನಾಗರಾಜ್ ಶ್ರೀ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿ ನಾಡದೇವತೆ ಸಮಸ್ತ ನಾಗರೀಕ ಬಂಧುಗಳಿಗೆ ಸುಖ ಶಾಂತಿ ನೆಮ್ಮದಿ ತರಲಿ. ಈಗಾಗಲೇ ವರ್ಣನ ಕೃಪೆಯಿಂದ ರೈತರು ಸಂತೃಪ್ತಿ ಕಂಡಿದ್ದಾರೆ. ಜಲಾಶಯಗಳು ಭರ್ತಿಯಾಗಿ ಕುಡಿಯುವ ನೀರಿಗೂ ತತ್ವಾರ ಇಲ್ಲದಂತಾಗಿದೆ. ರೈತರು ಬೆಳೆಯುವ ಬೆಳೆಗಳಿಗೆ ತೊಂದರೆ ಇಲ್ಲದಂತಾಗಿದೆ. ಪ್ರಸ್ತುತ ದಸರಾ ನಾಡ ಹಬ್ಬವು ಸಹ ಸಮಸ್ತ ಜನತೆಗೆ ಒಳಿತನ್ನು ಮಾಡಲಿ ಎಂದು ಹೇಳಿದ ಅವರು ಲೋಕಸಭೆ ಉಪ ಚುಣಾವಣೆ ನೀತಿ ಸಂಹಿತೆ ಆರಂಭಗೊಂಡಿರುವುದರಿಂದ ದಸರಾ ಹಬ್ಬವನ್ನು ಸರಳವಾಗಿ ಆಚರಿಸಲಾಗುವುದು. ಚುನಾಯಿತ ಪ್ರತಿನಿಧಿಗಳು, ಸಂಘ ಸಂಸ್ಥೆಗಳ ಮುಖಂಡರು ಸಹಕರಿಸುವಂತೆ ಮನವಿ ಮಾಡಿದರು.
ನಗರಸಭಾಧ್ಯಕ್ಷ ಎಸ್.ಹಾಲಮ್ಮ, ಸದಸ್ಯರಾದ ವಿ. ಕದಿರೇಶ್, ಎಂ. ರಾಜು, ಪ್ರಕಾಶ್ ರಾವ್, ನರಸಿಂಹನ್, ಮೃತುಜಾಖಾನ್, ಗುಣಶೇಖರ್, ಭಾಗ್ಯಮ್ಮ ಮುಂತಾದವರು ಭಾಗವಹಿಸಿದ್ದರು. ಪೌರಾಯುಕ್ತ ಶ್ರೀಕಂಠಸ್ವಾಮಿ ಸರ್ವರನ್ನು ಸ್ವಾಗತಿಸಿ ಸರಳವಾಗಿ ಆಚರಿಸುವ ನಾಡಹಬ್ಬ ಆಚರಣೆಗೆ ಎಲ್ಲರ ಸಹಕಾರ ಕೋರಿದರು.
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಂಗನಾಥ ಶರ್ಮ ಪೂಜೆ ನೆರವೇರಿಸಿದರು. ಸಹಾಯಕ ಅರ್ಚಕ ನರಸಿಂಹಾಚಾರ್, ಬ್ರಾಹ್ಮಣ ಸಂಘದ ಅಧ್ಯಕ್ಷ ರಮಾಕಾಂತ್, ಕಂದಾಯಾಧಿಕಾರಿ ಪ್ರಶಾಂತ್, ನಗರಸಭೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post