ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನ ಗೋಣಿಬೀಡು ಶಾಲಾ ಆವರಣದಲ್ಲಿ ಸೆ.21ರಂದು ಮಾಜಿ ಶಾಸಕ ಎಂ.ಜೆ ಅಪ್ಪಾಜಿ ಅವರ ಪ್ರಥಮ ವರ್ಷದ ಪುಣ್ಯ ಸ್ಮರಣೆ ಹಾಗೂ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಶಾರದ ಅಪ್ಪಾಜಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಪ್ಪಾಜಿ ಅವರ ಪುಣ್ಯ ಸ್ಮರಣೆಯನ್ನು ರಾಜಕೀಯವಾಗಿ ಮಾಡುತ್ತಿಲ್ಲ. ನಮ್ಮ ಮನೆಯ ಕಾರ್ಯದಂತೆ ಮಾಡಲಾಗುತ್ತಿದ್ದು, ಯಾವುದೇ ರಾಜಕೀಯ ಭೇದಭಾವವಿಲ್ಲದೆ ಕ್ಷೇತ್ರದ ಎಲ್ಲರೂ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಎಲ್ಲಾ ರಾಜಕೀಯ ಪಕ್ಷದವರನ್ನು ಪುಣ್ಯ ಸ್ಮರಣೆ ಕಾರ್ಯಕ್ಕೆ ಆಹ್ವಾನಿಸಲಾಗುತ್ತಿದ್ದು, ಅಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಬರುವ ನಿರೀಕ್ಷೆ ಇದೆ. ಎಲ್ಲರೂ ಒಗ್ಗೂಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಅಪ್ಪಾಜಿ ಅವರ ಆತ್ಮಕ್ಕೆ ಶಾಂತಿ ಕೋರಬೇಕು ಎಂದು ವಿನಂತಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಆರ್. ಕರುಣಾಮೂರ್ತಿ ಮಾತನಾಡಿ, ಅಪ್ಪಾಜಿ ಕ್ಷೇತ್ರದಲ್ಲಿ ಬಡ ವರ್ಗದವರ ಧ್ವನಿಯಾಗಿ ಮಾತ್ರವಲ್ಲದೆ ಎಲ್ಲಾ ಧರ್ಮದ, ಜನಾಂಗದವರ ಪರವಾಗಿದ್ದರು. ಅವರು ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಗಳು ಅವರಲ್ಲಿನ ರಾಜಕೀಯ ಬದ್ಧತೆಗೆ ಸಾಕ್ಷಿಯಾಗಿವೆ. ಅಧಿಕಾರ ಇರಲಿ, ಇಲ್ಲದಿರಲಿ ಎಲ್ಲಾ ಸಮಯದಲ್ಲೂ ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತಿದ್ದರು. ಇಂತಹ ಧೀಮಂತ ನಾಯಕನ ಪುಣ್ಯ ಸ್ಮರಣೆಯನ್ನು ನಾವೆಲ್ಲರೂ ಸೇರಿ ಅವಿಸ್ಮರಣೀಯವಾಗಿಸಬೇಕಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಜೆ.ಪಿ ಯೋಗೇಶ್, ಎಸ್. ಮಣಿಶೇಖರ್, ಮಾಜಿ ಸದಸ್ಯ ಎಸ್. ಕುಮಾರ್, ಮುಖಂಡರಾದ ಟಿ.ಡಿ ಶ್ರೀಧರ್, ಕರಿಯಪ್ಪ, ಲೋಕೇಶ್ವರ್‌ರಾವ್, ನಂಜುಂಡೇಗೌಡ, ಡಾರ್ವಿ, ಮೈಲಾರಪ್ಪ, ಎಂ. ರಾಜು, ಫೀರ್‌ಷರೀಫ್, ದಿಲೀಪ್, ಕುಮಾರ್, ನಗರಸಭಾ ಸದಸ್ಯರಾದ ಬಸವರಾಜ ಆನೇಕೊಪ್ಪ, ಉದಯಕುಮಾರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post