ಭದ್ರಾವತಿ: ರಾಜಕೀಯದಲ್ಲಿ ಸಾಹಿತ್ಯವಿರಬೇಕೇ ವಿನಾ ಸಾಹಿತ್ಯದಲ್ಲಿ ರಾಜಕೀಯ ಬೆರೆಸಬಾರದು ಎಂದು ಬೆಂಗಳೂರಿನ ರಂಗಕರ್ಮಿ, ಲೇಖಕ, ಕಿರುತೆರೆನಟ ಹಾಗೂ ನಿರ್ದೇಶಕ ಎಸ್.ಎನ್. ಸೇತುರಾಂ ಹೇಳಿದರು.
ನಗರದ ಉಂಬ್ಳೇಬೈಲ್ ರಸ್ತೆ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ಆವರ್ತ ಪ್ರಕಾಶನದ ದೀಪ್ತಿ ಭದ್ರಾವತಿ ಅವರ ಗೀರು ಕಥಾ ಸಂಕಲನ ಲೋಕಾರ್ಪಣೆ ಮಾಡಿ ಮಾತನಾಡಿದರು.
ಸಾಹಿತ್ಯ ರಚನೆಯಲ್ಲಿ ಸಂಕೋಚವಿದ್ದರೂ ಮುದ್ರಿತವಾದ ಪುಸ್ತಕಗಳ ಮಾರಾಟದಲ್ಲಿ ಯಾವುದೇ ಸಂಕೋಚವಿರಬಾರದು. ಸಂಸಾರವಂತರಾದ ಸಾಹಿತಿಗಳಿಂದ ಉತ್ತಮ ಕೃತಿ ರಚನೆ ಸಾಧ್ಯವಾಗುತ್ತದೆ. ಆದರೆ ಸಂಸಾರದಿಂದ ದೂರ ಉಳಿದವರಿಂದ ಸಾಹಿತ್ಯ ಕೃತಿರಚನೆ ಕಷ್ಟಸಾಧ್ಯ. ಓದುಗರ ಮನಮುಟ್ಟುವ ರೀತಿಯ ಸಾಹಿತ್ಯ ಕೃತಿಗಳ ರಚನೆಯಾಗದಿರುವುದರಿಂದ 2 ದಶಕಗಳಲ್ಲಿ ಪುಸ್ತಕ ಓದುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಮುಖವಾಗುತ್ತಿರುವುದು ವಿಷಾಧನೀಯ. ವಸ್ತುಸ್ಥಿತಿಗೆ ಹತ್ತಿರವಾದ ಪಾತ್ರ ಮತ್ತು ಸನ್ನಿವೇಶಗಳನ್ನು ಹೊಂದಿರುವ ಕೃತಿ ರಚನೆಯಾಗಬೇಕೇ ವಿನಾ ಸಾಹಿತ್ಯ ರಚನೆಯಲ್ಲಿನ ಪಾತ್ರಗಳು ಮತ್ತೊಬ್ಬರ ಮನಸ್ಸಿಗೆ ನೋವುಂಟಾಗುವ ರೀತಿಯಿರಬಾರದು ಎಂದರು.
ಹಾನಗಲ್ ಸಾಹಿತಿ ವಿಜಯಕಾಂತ್ ಪಾಟೀಲ್ ಮಾತನಾಡಿ ಲೇಖಕನಿಗೆ ಬರವಣಿಗೆಯಲ್ಲಿ ತೃಪ್ತಿಯಿರಬಾರದು. ಸಾಹಿತಿಗಳಲ್ಲಿ ಸಮಾಧಾನವಿದ್ದಾಗ ಮಾತ್ರ ಉತ್ತಮ ಕೃತಿಗಳು ರಚಿಸಲು ಸಾಧ್ಯವಾಗುತ್ತದೆ. ದೀಪ್ತಿ ಅವರು ಬರದಿರುವ ಪಾಟೀಲ್ ಪುಟ್ಟಪ್ಪ ಪ್ರಶಸ್ತಿ ವಿಜೇತ ಕೃತಿ ಗೀರು ಕಥಾಸಂಕಲನದಲ್ಲಿ ಬರುವ ಕಥೆ ಹಾಗೂ ಪಾತ್ರಗಳು ಮನಮುಟ್ಟುವಂತಿವೆ ಎಂದು ಕೃತಿಯ ಕುರಿತ ಅಭಿಪ್ರಾಯ ವ್ಯಕ್ತಪಡಿಸಿದರು.
ಗೀರು ಕಥಾಸಂಕಲನದ ಕರ್ತೃ ದೀಪ್ತಿ ಭದ್ರಾವತಿ ಪ್ರಾಸ್ತಾವಿಕ ನುಡಿಗಳನ್ನಾಡಿ, ತಾವು ಕರ್ತವ್ಯ ನಿರ್ವಹಿಸುವ ಆಸ್ಪತ್ರೆ ಹಾಗೂ ಆ ಊರಿನಲ್ಲಿ ತಮ್ಮ ಅನುಭವಕ್ಕೆ ಬಂದ ಅನೇಕ ಘಟನೆ ಹಾಗೂ ವ್ಯಕ್ತಿಗಳ ನೋವು ನಲಿವು ಕೃತಿಯಲ್ಲಿ ಅದರಲ್ಲಿಯೂ ವಿಶೇಷವಾಗಿ ಮಹಿಳೆಯರ ಆಂತರಿಕ ತೊಳಲಾಟ ಮುಂತಾದ ಸಂಗತಿಗಳೇ ನನ್ನ ಈವರೆಗಿನ ನಾಲ್ಕು ಕೃತಿಗಳ ಹೂರಣವಾಗಿದೆ ಎಂದರು.
ಶಾಶ್ವತಿ ಮಹಿಳಾ ಸಂಘದ ಅಧ್ಯಕ್ಷೆ ಬಿ.ಎಸ್. ರೂಪಾರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗೀರು ಕಥಾಸಂಕಲನ ರಚಿಸಿರುವ ದೀಪ್ತಿ ಭದ್ರಾವತಿ ಇವರಲ್ಲಿ ಹುದುಗಿರುವ ಸಾಹಿತ್ಯ ಪ್ರತಿಭೆ ಕೃತಿಯಿಂದ ಕೃತಿಗೆ ಬೆಳೆಯುತ್ತಿರುವುದು ಗೋಚರವಾಗುತ್ತದೆ. ಇವರ ಸಾಹಿತ್ಯ ಕೃಷಿ ಇದೇ ದಿಸೆಯಲ್ಲಿ ಸಾಗಿದರೆ ಇವರು ಇನ್ನೂ ಹೆಚ್ಚಿನ ಉತ್ತಮ ಕೃತಿಗಳನ್ನು ಸಾಹಿತ್ಯಲೋಕಕ್ಕೆ ಕೊಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆರೀತಿ ಬೆಳೆಯುವ ಮೂಲಕ ದೀಪ್ತಿ ಭದ್ರಾವತಿ ಕ್ಷೇತ್ರಕ್ಕೆ ಕೀರ್ತಿ ತರಲಿ ಎಂದು ಶುಭ ಹಾರೈಸಿದರು.
ಅನ್ನಪೂರ್ಣ ಸತೀಶ್ ಪ್ರಾರ್ಥಿಸಿ, ಕುಮಾರಿ ಮೇಘನ ಬೇಕಲ್ ಸ್ವಾಗತಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post