ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ರಾಜ್ಯ ಒಕ್ಕಲಿಗರ ಸಂಘದ ಕಾರ್ಯಕಾರಿ ಸಮಿತಿಯ ಶಿವಮೊಗ್ಗ-ಉತ್ತರ ಕನ್ನಡ ಜಿಲ್ಲೆಯನ್ನೊಳಗೊಂಡ ವ್ಯಾಪ್ತಿಯ ನಿರ್ದೇಶಕರ ಸ್ಥಾನದ ಚುನಾವಣೆಗೆ ತಾಲೂಕು ಒಕ್ಕಲಿಗರ ಸಂಘ ಪ್ರತಿನಿಧಿಸಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ನಾಮಪತ್ರ ಸಲ್ಲಿಸಿದರು.
ಒಕ್ಕಲಿಗ ಸಮುದಾಯದವರು ಜಿಲ್ಲೆಯಲ್ಲಿ ತೀರ್ಥಹಳ್ಳಿ ತಾಲೂಕಿನ ನಂತರ ಹೆಚ್ಚಿನ ಸಂಖ್ಯೆಯಲ್ಲಿ 2ನೇ ಸ್ಥಾನದಲ್ಲಿದ್ದರೂ ಸಹ ತಾಲೂಕಿನಿಂದ ಇಲ್ಲಿಯವರೆಗೂ ನಿರ್ದೇಶಕರ ಸ್ಥಾನಕ್ಕೆ ಯಾರೊಬ್ಬರೂ ಸಹ ಆಯ್ಕೆಯಾಗದಿರುವುದು ಇಲ್ಲಿನ ಒಕ್ಕಲಿಗ ಸಮುದಾಯದವರಿಗೆ ಸವಾಲಾಗಿ ಪರಿಣಮಿಸಿದೆ. ಈ ಹಿನ್ನಲೆಯಲ್ಲಿ ಈ ಬಾರಿ ಹೇಗಾದರೂ ಮಾಡಿ ನಿರ್ದೇಶಕರ ಸ್ಥಾನ ತನ್ನದಾಗಿಸಿಕೊಳ್ಳಲು ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ತಾಲೂಕು ಒಕ್ಕಲಿಗರ ಸಂಘ ಈ ಬಾರಿ ಮುಂಚೂಣಿಗೆ ಬಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಸ್. ಕುಮಾರ್ ಅವರನ್ನು ಅಧಿಕೃತವಾಗಿ ಕಣಕ್ಕಿಳಿಸಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಡಿಸಿಸಿ ಬ್ಯಾಂಕ್ ಸದಸ್ಯ, ಸಹಕಾರಿ ಧುರೀಣ ಜೆ.ಪಿ ಯೋಗೇಶ್, 33ನೇ ವಾರ್ಡಿನ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್, ಶಿಮೂಲ್ ಮಾಜಿ ಅಧ್ಯಕ್ಷ ಡಿ. ಆನಂದ್ ಮತ್ತು ಪ್ರಗತಿಪರ ಹೋರಾಟಗಾರ, ಮುಖಂಡ ಬಾಲಕೃಷ್ಣ ಸೇರಿದಂತೆ ಇನ್ನಿತರರು ಈ ಬಾರಿ ಚುನಾವಣೆಗೆ ಸ್ಪರ್ಧಿಸಲು ತೀವ್ರ ಪೈಪೋಟಿಗೆ ಮುಂದಾಗಿದ್ದರು.
ಚುನಾವಣೆಗೆ ನಾಮಪತ್ರ ಸಲ್ಲಿಸಲು ಕೇವಲ 2 ದಿನಗಳು ಮಾತ್ರ ಬಾಕಿ ಉಳಿದಿದ್ದ ಹಿನ್ನಲೆಯಲ್ಲಿ ಸೋಮವಾರ ಅಪ್ಪರ್‌ಹುತ್ತಾ ಅನನ್ಯ ವಿದ್ಯಾಸಂಸ್ಥೆ ಆವರಣದಲ್ಲಿ ಸಮುದಾಯದವರ ಬಹಿರಂಗ ಸಭೆ ನಡೆಸುವ ಮೂಲಕ ಅಂತಿಮವಾಗಿ ಎಸ್. ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.
ಎಸ್. ಕುಮಾರ್ ಸಮುದಾಯದ ಪ್ರಮುಖರಾದ ಶಾರದ ಅಪ್ಪಾಜಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ನಂಜುಂಡೇಗೌಡ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಟಿ ರವಿ, ಮುಖಂಡರಾದ ಪದ್ಮನಾರಾಯಣ, ಭಾಗ್ಯಮ್ಮ, ಅನಿಲ್‌ಕುಮಾರ್, ಉಮೇಶ್ ಸೇರಿದಂತೆ ಇನ್ನಿತರರೊಂದಿಗೆ ನಾಮಪತ್ರ ಸಲ್ಲಿಸಿದರು.
ಈ ನಡುವೆ 33ನೇ ವಾರ್ಡಿನ ನಗರಸಭಾ ಸದಸ್ಯ ಆರ್. ಮೋಹನ್‌ಕುಮಾರ್ ಸಹ ಮಂಗಳವಾರ ಪ್ರತ್ಯೇಕವಾಗಿ ನಾಮಪತ್ರ ಸಲ್ಲಿಸಿದ್ದು, ನನ್ನ ಸ್ಪರ್ಧೆ ವೈಯಕ್ತಿಕವಾಗಿದೆ. ಯಾರ ವಿರುದ್ಧವೂ ನಾನು ಸ್ಪರ್ಧಿಸುತ್ತಿಲ್ಲ ಎಂದು ಆರ್. ಮೋಹನ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post