ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಗರಸಭೆಗೆ ಇಂದು ಮತದಾನ ನಡೆಯುತ್ತಿದ್ದು, ರಾತ್ರಿಯಿಂದ ಜನತಾ ಕರ್ಫ್ಯೂ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಮುಂಜಾನೆ 10ಗಂಟೆಯಿಂದಲೇ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲು ಸೂಚಿಸಿದ್ದು, ಇದಕ್ಕೆ ಸಾರ್ವಜನಿಕ ವಲಯದಿಂದ ವ್ಯಾಪಕ ಟೀಕೆ ವ್ಯಕ್ತವಾಗಿದೆ.
ರಾಜ್ಯಾದ್ಯಂತ ಇಂದು ರಾತ್ರಿ 9ಗಂಟೆಯಿಂದ ಜನತಾ ಕರ್ಫ್ಯೂ ಜಾರಿಗೆ ಬರಲಿದೆ. ಆದರೆ, ಇಂದು ಚುನಾವಣೆ ನಡೆಯುತ್ತಿರುವ ನಗರಗಳಲ್ಲಿ ಬೆಳಿಗ್ಗೆ 10ಗಂಟೆಯಿಂದಲೇ ವ್ಯಾಪಾರ ವಹಿವಾಟು, ಜನರ ಓಡಾಟವನ್ನು ನಿರ್ಬಂಧಿಸಲು ಸರ್ಕಾರ ಆದೇಶಿಸಿದ್ದು, ಬೆಳಿಗ್ಗೆ 9:30ರಿಂದಲೇ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಎಲ್ಲಾ ರೀತಿಯ ವಾಹನ ಸಂಚಾರಕ್ಕೆ ಪೊಲೀಸರು ತಡೆ ಒಡ್ಡಿದ್ದರು.
ಇದೇವೇಳೆ ಮೆಡಿಕಲ್ ಶಾಪ್, ಆಸ್ಪತ್ರೆ ಹೊರತಾಗಿ ಬೇರೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಲಾಗಿತ್ತು. ಸರ್ಕಾರ ಹಾಗೂ ಪೊಲೀಸರ ಈ ಕ್ರಮಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ಕುರಿತಂತೆ ಕಲ್ಪ ಮೀಡಿಯಾ ಹೌಸ್ ಜೊತೆ ಅಳಲು ತೋಡಿಕೊಂಡ ಕೆಲವು ವ್ಯಾಪಾರಸ್ಥರು ಇಂದು ರಾತ್ರಿಯಿಂದ ಸಂಪೂರ್ಣ ಲಾಕ್‌ಡೌನ್ ಘೋಷಿಸಿದ್ದಾರೆ. ರಾಜ್ಯ ಎಲ್ಲಾ ಕಡೆಗಳಲ್ಲೂ ವಹಿವಾಟುಗಳು ಎಂದಿನಂತೆ ನಡೆಯುತ್ತಿವೆ. ಆದರೆ, ಚುನಾವಣೆ ನೆಪದಲ್ಲಿ ಬೆಳಗ್ಗಿನಿಂದಲೇ ಎಲ್ಲವನ್ನು ಬಂದ್ ಮಾಡಿಸಿದ್ದು, ಎಷ್ಟರಮಟ್ಟಿಗೆ ಸರಿ ಎಂದು ಕಿಡಿಕಾರಿದರು.
ಇನ್ನು ಪ್ರಮುಖ ವೃತ್ತ ಹಾಗೂ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಚಾರ ಸ್ಥಗಿತಗೊಳಿಸಿದ್ದ ಹಿನ್ನೆಲೆಯಲ್ಲಿ ಚುನಾವಣಾ ಕೆಲಸಕ್ಕೆ ತೆರಳುತ್ತಿದ್ದ ರಾಜಕೀಯ ಪಕ್ಷದ ಕಾರ್ಯಕರ್ತರುಗಳೂ ಹಾಗೂ ಮತದಾನಕ್ಕೆ ತೆರಳುತ್ತಿದ್ದವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದ ದೃಶ್ಯ ಕಂಡುಬಂದಿತು.
ಆದರೆ, ಚುನಾವಣೆ ನಡೆಯುತ್ತಿರುವ ನಗರಗಳಲ್ಲಿ ಭದ್ರತೆ ನಿಯೋಜಿಸುವುದು ಹಾಗೂ ಇಂದು ರಾತ್ರ್ರಿಯಿಂದಲೇ ಜನತಾ ಕರ್ಫ್ಯೂ ಜಾರಿ ಮಾಡುವುದು ಪೊಲೀಸರಿಗೂ ಸವಾಲಿನ ಕೆಲಸ. ಹೀಗಾಗಿ ಸರ್ಕಾರದ ಆದೇಶದಂತೆ ಪೊಲೀಸ್ ಇಲಾಖೆ ಹಾಗೂ ನಗರಸಭೆ ಆಡಳಿತ ಎಲ್ಲವನ್ನು ಸ್ಥಗಿತಗೊಳಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post