ಭದ್ರಾವತಿ: ಹಿಂದೂ ದೇವರ ಹೆಸರಿಟ್ಟುಕೊಂಡು ಹಿಂದೂ ಧರ್ಮದ ದೇವರುಗಳ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ವಿಕೃತ ಮನಸ್ಸಿನ ಎಸ್.ಕೆ. ಭಗವಾನ್ ರವರನ್ನು ರಾಜ್ಯದಿಂದ ಗಡೀಪಾರು ಮಾಡುವಂತೆ ಆಗ್ರಹಿಸಿ ಗುರುವಾರ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು.
ಸಾಹಿತಿಯಾಗಿರುವ ಎಸ್.ಕೆ. ಭಗವಾನ್ ಹಿಂದೂ ಧರ್ಮದ ಮತ್ತು ದೇವರುಗಳ ವಿರುದ್ದ ಪದೆ-ಪದೇ ಅವಹೇಳನವಾಗಿ ಹೇಳಿಕೆಗಳನ್ನು ನೀಡುತ್ತಾ ಪುಕ್ಕಟೆ ಅಗ್ಗದ ಪ್ರಚಾರ ಗಿಟ್ಟಿಸಿಕೊಳ್ಳುವಲ್ಲಿ ಮುಂದಾಗಿದ್ದಾರೆ. ಇವರ ವರ್ತನೆಯನ್ನು ಹಿಂದೂಪರ ಸಂಘಟನೆಗಳು ತೀವ್ರವಾಗಿ ಖಂಡಿಸುತ್ತವೆ. ಹಿಂದೂ ಧರ್ಮ ಪದ್ದತಿಯು ಯಾವುದೇ ಜಾತಿ, ಮತ, ಪಂಥಗಳಿಗೆ ಸೀಮಿತವಾಗದೆ ಸರ್ವೇ ಜನಾಃ ಸುಖಿನೋ ಭವಂತೂ ಎಂಬಂತಹ ವಿಶಾಲ ಮನೋಭಾವದ ಧರ್ಮವಾಗಿದೆ. ತಲೆ ತಲಾಂತರಗಳಿಂದ ಭಕ್ತಿ ಪೂರ್ವಕವಾಗಿ, ಪೂಜ್ಯ ಭಾವನೆಯಿಂದ ಪರಸ್ಪರ ಪ್ರೀತಿ, ವಿಶ್ವಾಸ, ಸೌಹಾರ್ಧದಿಂದ ಬಾಳುತ್ತಿದ್ದರು ಸಹ ಕೋಟ್ಯಾಂತರ ಜನರ ಭಕ್ತಿ ಭಾವನೆಗೆ ಒಳಗೊಂಡಿರುವ ಶ್ರೀರಾಮ ಮತ್ತು ಸೀತಾಮಾತೆಯರ ಕುರಿತು ಅವಹೇಳನಕರ ಹೇಳಿಕೆ ನೀಡಿ ಘಾಸಿ ಉಂಟು ಮಾಡಿದ್ದಾರೆಂದು ಪ್ರತಿಭಟನಾಕಾರರು ಉಗ್ರವಾಗಿ ಖಂಡಿಸಿದರು.
ಇಂತಹ ಹೇಳಿಕೆ ನೀಡುತ್ತಿರುವುದರ ಹಿಂದೆ ವ್ಯವಸ್ಥಿತ ಪಿತೂರಿ ಮತ್ತು ಒಳಸಂಚು ನಡೆಯುತ್ತಿದ್ದು ವಿಕೃತ ಮನಸ್ಸಿನ ಭಗವಾನರಿಗೆ ಸರಕಾರ ನೀಡಿರುವ ಪೊಲೀಸ್ ಭದ್ರತೆ ಹಿಂಪಡೆದು ಸರಕಾರದ ಬೊಕ್ಕಸಕ್ಕೆ ಉಂಟಾಗಿರುವ ಲಕ್ಷಾಂತರ ರೂಗಳನ್ನು ಅವರಿಂದ ವಸೂಲಿ ಮಾಡಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯು ವಿಶ್ವ ಹಿಂದೂ ಪರಿಷದ್ ಹಾಗು ಸಂಘ ಪರಿವಾರದ ನೇತೃತ್ವದಲ್ಲಿ ನಡೆಯುತು. ಆರಂಭದಲ್ಲಿ ನಗರದ ರಂಗಪ್ಪವೃತ್ತದಲ್ಲಿ ಜಮಾಯಿಸಿ ಭಗವಾನ್ ವಿರುದ್ದ ಘೋಷಣೆಗಳನ್ನು ಕೂಗಿ ಆತನ ವರ್ತನೆಯನ್ನು ಖಂಡಿಸಿ ಮಿನಿ ವಿಧಾನಸೌಧಕ್ಕೆ ಮೆರವಣಿಗೆ ಮೂಲಕ ತೆರಳಿ ತಹಸೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಎಚ್‌ಪಿ ಮುಖಂಡ ಹಾ.ರಾಮಪ್ಪ, ಅರ್ಚಕರ ಸಂಘದ ಗೌರವಾಧ್ಯಕ್ಷ ಸೋಮಯಾಜಿ, ಬಿಜೆಪಿ ಮುಖಂಡರಾದ ಧರ್ಮಪ್ರಸಾದ್, ಆರ್.ಎಸ್. ಶೋಭಾ, ಓಂಕಾರಪ್ಪ ಮಾತನಾಡಿದರು. ಜಿ. ಆನಂದಕುಮಾರ್, ರಾಮಣ್ಣ, ಬಿ.ಕೆ. ಶ್ರೀನಾಥ್, ಹೇಮಾವತಿ ವಿಶ್ವನಾಥ್, ಸುನಿಲ್, ಕೆ.ಆರ್.ಸತೀಶ್, ರಾಘವೇಂದ್ರ ಉಪಾಧ್ಯಾಯ ಸೇರಿದಂತೆ ಅನೇಕರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post