ನವದೆಹಲಿ: ದೇಶದ ಕುತೂಹಲವನ್ನು ತನ್ನತ್ತ ಸೆಳೆದಿರುವ ಭಾವನಾತ್ಮಕ ವಿಚಾರ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದದ ವಿಚಾರಣೆ ಇಂದಿನಿಂದ ಸುಪ್ರೀಂ ಕೋರ್ಟ್ ನಲ್ಲಿ ನಡೆಯಲಿದ್ದು, ಎಲ್ಲರ ಚಿತ್ತ ನ್ಯಾಯಾಲಯದತ್ತ ನೆಟ್ಟಿದೆ.
ಸಿಜೆಐ ರಂಜನ್ ಗಗೋಯ್ ಹಾಗೂ ನ್ಯಾ. ಎಸ್.ಕೆ. ಕೌಲ್ ಅವರನ್ನೊಳಗೊಂಡ ನ್ಯಾಯಪೀಠದ ಮುಂದೆ ಅರ್ಜಿಗಳು ಇಂದಿನಿಂದ ವಿಚಾರಣೆಗೆ ಬರಲಿವೆ.
ಕಳೆದ ಅಕ್ಟೋಬರ್’ನಲ್ಲಿ ಅಯೋಧ್ಯೆ ವಿವಾದದ ವಿಚಾರಣೆ ವಿಳಂಬ ಹಾಗೂ ತ್ವರಿತಗತಿಯ ವಿಚಾರಣೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಿದ್ದ ನ್ಯಾಯಾಲಯ ನ್ಯಾಯಾಲಯಕ್ಕೆ ಯಾವ ವಿಚಾರ ಎಷ್ಟು ಪ್ರಮುಖ ಎನ್ನುವುದು ತಿಳಿದಿದೆ ಎಂದು ಹೇಳಿತ್ತು. ಅಲ್ಲದೆ ಅಯೋಧ್ಯೆ ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಅರ್ಜಿಗಳ ವಿಚಾರಣೆಯನ್ನು ಜನವರಿಗೆ ಮುಂದೂಡಿ ಆದೇಶಿಸಿತ್ತು. ಅದರಂತೆ ಇಂದಿನಿಂದ ಅರ್ಜಿಗಳ ವಿಚಾರಣೆ ಪ್ರಾರಂಭವಾಗಲಿದೆ.
ಹಿಂದೆ ಏನಾಗಿತ್ತು?
2010ರಲ್ಲಿ ಈ ವಿವಾದದ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ ಈ 2.77 ಎಕರೆ ವಿವಾದಿತ ಪ್ರದೇಶವನ್ನು ರಾಮಲಲ್ಲಾ, ಸುನ್ನಿ ವಕ್ಫ್ ಬೋರ್ಡ್ ಮತ್ತು ನಿರ್ಮೋಹಿ ಅಖರ ಈ ಮೂವರಿಗೆ ಸಮನಾಗಿ ಹಂಚಿಕೆ ಮಾಡಿ ತೀರ್ಪು ಕೊಟ್ಟಿತ್ತು. ಆ ತೀರ್ಪನ್ನು ಪ್ರಶ್ನಿಸಿ ಸಾಕಷ್ಟು ಮೇಲ್ಮನವಿಗಳು ಸುಪ್ರೀಂ ಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದವು. ಈ ಅರ್ಜಿಗಳ ಅಂತಿಮ ಹಂತದ ವಿಚಾರಣೆ ನಡೆಸಬೇಕಿದ್ದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೋಯ್, ನ್ಯಾಯಮುರ್ತಿ ಸಂಜಯ್ ಕಿಶನ್ ಕೌಲ್ ಮತ್ತು ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ಅವರನ್ನೊಳಗೊಂಡ ಪೀಠ ವಿಚಾರಣೆಯನ್ನು ಜನವರಿಗೆ ಮುಂದೂಡಿತ್ತು.
ಸುಗ್ರೀವಾಜ್ಞೆಗೆ ಒತ್ತಡ
ವಿವಾದ ಸಂಬಂಧದ ವಿಚಾರಣೆ ಜನವರಿಗೆ ಮುಂದೂಡಲ್ಪಟ್ಟ ಬೆನ್ನಲ್ಲೇ ರಾಮಮಂದಿರ ನಿರ್ಮಾಣಕ್ಕಾಗಿ ಸುಗ್ರೀವಾಜ್ಞೆ ಜಾರಿಗೆ ಕೇಂದ್ರದ ಮೇಲೆ ಒತ್ತಡಗಳು ಹೆಚ್ಚಾಗುತ್ತಾ ಬಂದಿದ್ದವು. ಅಲ್ಲದೆ, ಹಿಂದೂ ಸಂಘಟನೆಗಳು ಸುಗ್ರೀವಾಜ್ಞೆ ಅಥವಾ ಕಾನೂನು ಜಾರಿ ಮಾಡಲು ಸರ್ಕಾರವನ್ನು ಒತ್ತಾಯಿಸಿದ್ದವು. ಈ ವಿಚಾರ ಬಿಜೆಪಿ ಹಾಗೂ ಶಿವಸೇನೆ ನಡುವೆ ವಾಕ್ಸಮರಕ್ಕೆ ಸಹ ಕಾರಣವಾಗಿತ್ತು.
ಮೋದಿ ಪ್ರತಿಕ್ರಿಯೆ
ಇನ್ನು ಮೊನ್ನೆಯಷ್ಟೇ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ್ದ ಪ್ರಧಾನಿ ಮೋದಿ, ರಾಮಮಂದಿರ ನಿರ್ಮಾಣಕ್ಕೆ ಸುಗ್ರೀವಾಜ್ಞೆ ಹೊರಡಿಸುವುದಿಲ್ಲ. ಸಂವಿಧಾನದ ಪ್ರಕಾರವೇ ಸಮಸ್ಯೆಗಳನ್ನು ಪರಿಹಾರ ಮಾಡಿ, ಅಯೋಧ್ಯೆಯಲ್ಲಿಯೇ ರಾಮ ಮಂದಿರ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತು ಸುಗ್ರೀವಾಜ್ಞೆ ತರುವ ವಿಚಾರ ಇಲ್ಲ, ಹಾಗೊಂದು ವೇಳೆ ಯಾವುದೇ ಕ್ರಮ ತೆಗೆದುಕೊಳ್ಳುವುದಾದಲ್ಲಿ ಅದು ನ್ಯಾಯಾಂಗ ಪ್ರಕ್ರಿಯೆ ಮುಗಿದ ನಂತರವಷ್ಟೇ ನಿರ್ಧಾರವಾಗಲಿದೆ ಎಂದಿದ್ದರು.
Discussion about this post