ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಕುಟುಂಬದ ಸದಸ್ಯರ ಜೊತೆಗೆ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆಯೂ ಸಹ ಹೆಚ್ಚಿನ ಕಾಳಜಿ ವಹಿಸಬೇಕು. ಈ ನಿಟ್ಟಿನಲ್ಲಿ ಆರೋಗ್ಯ ರಕ್ಷಣೆ ಕುರಿತು ಹೆಚ್ಚಿನ ಮಾಹಿತಿ ಪಡೆದುಕೊಳ್ಳುವುದು ಅತ್ಯಂತ ಅವಶ್ಯವಾಗಿದೆ ಎಂದು ಚುಂಚಾದ್ರಿ ಮಹಿಳಾ ವೇದಿಕೆ ಅಧ್ಯಕ್ಷೆ ಎಂ.ಎಸ್ ಸುಧಾಮಣಿ ಹೇಳಿದರು.
ಅವರು ವೇದಿಕೆ ವತಿಯಿಂದ ಅಪ್ಪರ್ ಹುತ್ತಾದಲ್ಲಿರುವ ಒಕ್ಕಲಿಗರ ಸಮುದಾಯ ಭವನದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ಉಚಿತ ಕ್ಯಾನ್ಸರ್ ರೋಗ ತಪಾಸಣೆ ಹಾಗು ಅರಿವು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಮಾನ್ಯ ಕಾಯಿಲೆಗಳಾದ ಕೆಮ್ಮು, ಶೀತ, ನೆಗಡಿ, ಚಳಿ ಜ್ವರ, ತಲೆ ನೋವು ಇವುಗಳ ಹೊರತಾಗಿ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗಳ ಕುರಿತು ಸಹ ಮಹಿಳೆಯರು ಹೆಚ್ಚಿನ ತಿಳುವಳಿಕೆ ಹೊಂದಬೇಕಾದ ಅನಿವಾರ್ಯತೆ ಇದೆ. ಈ ಹಿನ್ನಲೆಯಲ್ಲಿ ವೇದಿಕೆ ವತಿಯಿಂದ ಆರೋಗ್ಯ ಶಿಬಿರವನ್ನು ನಡೆಸಿಕೊಂಡು ಬರಲಾಗುತ್ತಿದೆ. ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.
ನಗರಸಭೆ ಪೌರಾಯುಕ್ತ ಮನೋಹರ್ ಕಾರ್ಯಕ್ರಮ ಉದ್ಘಾಟಿಸಿದರು. ಶಿವಮೊಗ್ಗ ಮಲ್ನಾಡ್ ಕ್ಯಾನ್ಸರ್ ಆಸ್ಪತ್ರೆ ತಜ್ಞ ವೈದ್ಯರು ತಪಾಸಣೆ ನಡೆಸಿ, ಆರೋಗ್ಯದ ಕಾಳಜಿ ಕುರಿತು ಮಾಹಿತಿ ನೀಡಿದರು.
ವೇದಿಕೆ ಉಪಾಧ್ಯಕ್ಷೆ ಸುಮಾ ಶಂಕರ್, ಕಾರ್ಯದರ್ಶಿ ಲತಾ ಪ್ರಭಾಕರ್, ಸಹ ಕಾರ್ಯದರ್ಶಿ ನಳಿನಾ, ಖಜಾಂಚಿ ಶಶಿಕಲಾ ಹಾಗು ಸದಸ್ಯರು ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post