ಭದ್ರಾವತಿ: ಮೊಬೈಲ್ ಮತ್ತು ಟ.ವಿಯ ಬಳಕೆಯಿಂದಾಗಿ ಮಾನವೀಯ ಸ್ನೇಹ ಸೌಹಾರ್ಧ ಸಂಬಂಧಗಳು ಮರೆಯಾಗುತ್ತಿವೆ ಎಂದು ಬೊಮ್ಮನಕಟ್ಟೆ ಸರ್.ಎಂ.ವಿಶ್ವೇಶ್ವರಯ್ಯ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ವಿಷ್ಣುಮೂರ್ತಿ ವಿಷಾಧ ವ್ಯಕ್ತಪಡಿಸಿದರು.
ಅವರು ಶನಿವಾರ ಬೊಮ್ಮನಕಟ್ಟೆ ಸರಕಾರಿ ವಿಜ್ಞಾನ ಕಾಲೇಜಿನ ಸಭಾಂಗಣದಲ್ಲಿ ತಾಲೂಕು ಕಾರ್ಯನಿತರ ಪತ್ರಕರ್ತರ ಸಂಘದ ಸಹಯೋಗದಲ್ಲಿ ಏರ್ಪಡಿಸಿದ್ದ ಪತ್ರಿಕಾದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದಿನ ವಿದ್ಯಾರ್ಥಿಗಳು ಅತಿಯಾದ ಮೊಬೈಲ್ ಬಳಕೆ ಮತ್ತು ಟಿ.ವಿ ವೀಕ್ಷಣೆಯಲ್ಲೇ ಹೆಚ್ಚಿನ ಸಮಯಕಳೆಯುವ ಮನಸ್ಥಿತಿ ಬೆಳೆಸಿಕೊಂಡಿರುವ ಕಾರಣ ಮನೆ ಮತ್ತು ಹೊರಜಗತ್ತಿನ ಪರಿವೇ ಇಲ್ಲದೆ ಜೀವನದ ಅಮೂಲ್ಯ ಸಮಯವನ್ನು ವ್ಯರ್ಥಗೊಳಿಸಿಕೊಳ್ಳುತ್ತಿದ್ದಾರೆ. ಫೇಸ್‍ಬುಕ್ ನಂತಹ ಸಾಮಾಜಿಕ ಜಾಲತಾಣಗಳನ್ನು ಹ್ಯಾಕ್ ಮಾಡುವವರು ನಿಮ್ಮ ವೈಯಕ್ತಿಕ ವಿಷಯಗಳನ್ನು ಹ್ಯಾಕ್ ಮಾಡುವ ಮೂಲಕ ಜಗಜ್ಜಾಹಿರುಮಾಡುವ ಅಪಾಯವಿರುವುದರಿಂದ ವಿದ್ಯಾರ್ಥಿಗಳು ಗಮನಹರಿಸಿ ವೈಯಕ್ತಿಕ ವಿಷಯಗಳನ್ನು ಯಾವುದೇ ಕಾರಣಕ್ಕೂ ಫೇಸ್‍ಬುಕ್ ನಂತಹ ಜಾಲತಾಣದಲ್ಲಿ ಹಾಕಿಕೊಳ್ಳದಂತೆ ತಿಳಿಸಿದರು.
ವಾಟ್ಸ್‍ಆಪ್ ಗಳಲ್ಲಿ ಬರುವ ಸಂದೇಶಗಳು ಶೇ 50 ಮಿಥ್ಯಾಂಶಗಳಿಂದ ಕೂಡಿರುವುದರ ಜೊತೆಗೆ ಕೆಲವು ಸಂದೇಶಗಳು ಅಶ್ಲೀಲತೆಯಿಂದ ಕೂಡಿರುತ್ತವೆ, ಇಂತಹ ಅಶ್ಲೀಲ ಸಂದೇಶಗಳನ್ನು ರವಾನಿಸುವುದರಿಂದ ಇತರರಿಗೆ ಆಗುವ ತೊಂದರೆಗಳು ಅಪರಾಧಿಕ ಚಟುವಟಿಕೆಗಳೆನಿಸುತ್ತವೆ ಇದರಿಂದಲೂ ಸಹ ಕಾನೂನಿನ ಕ್ರಮಕ್ಕೆ ಒಳಗಾಗುವಂತಾಗುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ವಾಟ್ಸ್‍ಆಪ್ ಮುಂತಾದ ಸಾಮಾಜಿಕ ಜಾಲತಾಣಗಳ ಬಳಕೆಯ ಮೇಲೂ ಹಿಡಿತ ಹೊಂದಿರುವ ಅಗತ್ಯವಿದೆ. ವಿದ್ಯಾರ್ಥಿಗಳು ಪ್ರತಿನಿತ್ಯ ವೃತ್ತಪತ್ರಿಕೆಗಳನ್ನು ಕನಿಷ್ಠ ಹದಿನೈದು ನಿಮಿಷವಾದರೂ ಓದುವ ಹವ್ಯಾಸವನ್ನು ರೂಢಿಸಿಕೊಂಡರೆ ಜ್ಞಾನಾರ್ಜನೆಗೆ ಸಹಕಾರಿಯಾಗುವುದರ ಜೊತೆಗೆ ಸ್ಥಳೀಯ, ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ವಿಚಾರಗಳು ತಿಳಿಯಲು ಸಹಕಾರಿಯಾಗುತ್ತದೆ ಎಂದರು.
ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಾದ ಮೊದಲ ಬಹುಮಾನ ಪಡೆದ ಸಿಂಧು ಜೊಯ್ಸ್, ದ್ವಿತೀಯ ಬಹುಮಾನ ಪಡೆದ ಪ್ರಿಯಾಂಕ ಹಾಗು ತೃತೀಯ ಬಹುಮಾನ ಪಡೆದ ಮೋಹನ್ ಮಾತನಾಡಿ ಸಾಮಾಜಿಕ ಜಲತಾಣಗಳಲ್ಲಿ ಹ್ಯಾಕರ್ಸ್ ಹಾವಳಿಯಿರುವುದರಿಂದ ಎಚ್ಚರಿಕೆಯಿಂದ ಬಳಸಬೇಕು ವಿದ್ಯುನ್ಮಾನ ಮಾಧ್ಯಮಗಳು ಇಂದು ಹೆಚ್ಚಿನ ವಿಸ್ತಾರವನ್ನು ಹೊಂದಿದ್ದರೂ ಸಹ ಮುದ್ರಣ ಮಾದ್ಯಮವಾದ ಸುದ್ದಿಪತ್ರಿಕೆಗಳು ಹಿಂದಿನಿಂದಲೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಜನರ ಮನ್ನಣೆ ಉಳಿಸಿಕೊಂಡು ಬಂದಿವೆ ಎಂದರು.
ಪತ್ರಕರ್ತರ ಸಂಘದ ಉಪಾಧ್ಯಕ್ಷ ಕೂಡ್ಲಿಗೆರೆ ಮಂಜುನಾಥ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ವೇದಿಕೆಯಲ್ಲಿ ಕಾಲೇಜಿನ ಉಪನ್ಯಾಸಕರಾದ ಸುನಿತ, ಹಿರಿಯ ಪತ್ರಕರ್ತರಾದ ಕಣ್ಣಪ್ಪ, ಗಣೇಶ್ ರಾವ್ ಸಿಂಧ್ಯಾ, ಆನಂದ ಕುಮಾರ್ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಕೆ.ಎನ್.ಶ್ರೀಹರ್ಷ, ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೇರಿದಂತೆ ಕಾಲೇಜಿನ ಉಪನ್ಯಾಸಕರು, ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಅನೂಷ ನಿರೂಪಿಸಿದರೆ, ಮಹಾದೇವ್ ವಂದಿಸಿದರು. ಇದೇ ಸಂದರ್ಭದಲ್ಲಿ ಪತ್ರಕರ್ತ ಎಚ್.ಕೆ. ಶಿವಶಂಕರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post