ಭದ್ರಾವತಿ: ಕಾರ್ಗಿಲ್ ಯುದ್ಧವೇ ರೋಮಾಂಚನಕಾರಿಯಾಗಿದ್ದು, ಭಾರತೀಯ ವೀರ ಯೋಧರ ಸಾಹಸಕ್ಕೆ ಬೆಲೆ ಕಟ್ಟಲು ಯಾರಿಂದಲೂ ಸಾಧ್ಯವಿಲ್ಲ ಎಂದು ಶಿವಮೊಗ್ಗ ಸಶಸ್ತ್ರ ಮೀಸಲು ಪಡೆಯ ಇನ್ಸ್‍ಪೆಕ್ಟರ್ ಪ್ರಕಾಶ್ ತಿಳಿಸಿದರು.
ಅವರು ಶುಕ್ರವಾರ ಕಾರ್ಗಿಲ್ 20ನೇ ವರ್ಷದ ವಿಜಯೋತ್ಸವದ ಅಂಗವಾಗಿ ನಗರದ ರೈಫಲ್ ಅಸೋಸಿಯೇಷನ್, ರೋಟರಿ ಕ್ಲಬ್ ಹಾಗು ಶಿವಮೊಗ್ಗ ರೋಟರಿ ರಕ್ತ ನಿಧಿ ಆಶ್ರಯದಲ್ಲಿ ನ್ಯೂಟೌನ್ ರೋಟರಿ ಕ್ಲಬ್ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಅತ್ಯಂತ ಅಪಾಯಕಾರಿ ಯುದ್ಧ ಭೂಮಿಯಲ್ಲಿ ಯೋಧರು ಪಾಕಿಸ್ತಾನ ದೇಶದ ಸೈನಿಕರ ಅತಿಕ್ರಮಣದ ವಿರುದ್ಧ ಪ್ರಬಲವಾಗಿ ಹೋರಾಟ ನಡೆಸಿ ಯಶಸ್ವಿಯಾದರು. ಅಲ್ಲದೆ ನಮ್ಮ ದೇಶದ ಬಹಳಷ್ಟು ಸೈನಿಕರು ವೀರ ಮರಣ ಹೊಂದಿದರು. ನಮ್ಮ ಸೈನಿಕರ ಹೋರಾಟಕ್ಕೆ ಯಾರು ಬೆಲೆಕಟ್ಟಲು ಸಾಧ್ಯವಿಲ್ಲ. ಕಾರ್ಗಿಲ್ ವೀರಯೋಧರ ನೆನಪಿನಲ್ಲಿ ರಕ್ತದಾನ ಶಿಬಿರ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದರು.
ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಬಿ. ಮೂರ್ತಿ ಮಾತನಾಡಿ, ರೈಫಲ್ ಅಸೋಸಿಯೇಷನ್ ಹಲವಾರು ಸಮಾಜಮುಖಿ ಸೇವಾ ಕಾರ್ಯಗಳನ್ನು ಕೈಗೊಳ್ಳುತ್ತಿದ್ದು ಅಸೋಸಿಯೇಷನ್ ಕಾರ್ಯಕ್ಕೆ ಎಲ್ಲೆಡೆ ಹೆಚ್ಚಿನ ಬೆಂಬಲ ವ್ಯಕ್ತವಾಗುತ್ತಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗುವುದು ಎಂದರು.
ರೋಟರಿ ಕ್ಲಬ್‍ನ ಹಿರಿಯ ಸದಸ್ಯರಾದ ಡಾ. ಆರ್.ಸಿ ಬೆಂಗಳೂರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಅಡವೀಶಯ್ಯ, ಪೊಲೀಸ್ ನಗರ ವೃತ್ತ ನಿರೀಕ್ಷಕ ನಂಜಪ್ಪ, ಮೇಜರ್ ಡಾ. ವಿಕ್ರಮ್ ಕೆದಲಾಯ, ಸುಬೇದಾರ್ ಪೂರನ್ ಸಿಂಗ್, ರೈಫಲ್ ಅಸೋಸಿಯೇಷನ್ ಕಾರ್ಯದರ್ಶಿ ಎಂ. ರವಿ, ಡಿ.ಕೆ. ರಾಘವೇಂದ್ರರಾವ್ ಸೇರಿದಂತೆ ಇನ್ನಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ರೋಟರಿ ಜೋನಲ್ ಕೋ ಆರ್ಡಿನೇಟರ್ ಅಮಿತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು. ರೋಟರಿ ಸಂಸ್ಥೆಯ ಸುಂದರ್‍ಬಾಬು, ಪ್ರೊ. ಚಂದ್ರಪ್ಪ, ಪತಂಜಲಿ ಯೋಗ ಸಮಿತಿಯ ಅನ್ನಪೂರ್ಣ, ಲತಾ ಮೋರೆ, ಹಳೇನಗರ ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಹೇಮಾವತಿ ವಿಶ್ವನಾಥ್ ರಾವ್ ಮತ್ತಿತರರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ರೈಫಲ್ ಅಸೋಸಿಯೇಷನ್ ಅಧ್ಯಕ್ಷ ಮೂರ್ತಿ ಸೇರಿದಂತೆ ಅನೇಕರು ರಕ್ತದಾನ ಮಾಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post