ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಗಣೇಶ ಮೂರ್ತಿ (Ganesha Immersion) ವಿಸರ್ಜನೆಗೆ ತೆರಳಿದ್ದ ಯುವಕನೊಬ್ಬ ಆಕಸ್ಮಿಕವಾಗಿ ಕೆರೆಗೆ ಬಿದ್ದು ಮುಳುಗಿ ಮೃತಪಟ್ಟಿರುವ ದಾರುಣ ಘಟನೆ ಭದ್ರಾವತಿ (Bhadravathi) ತಾಲೂಕಿನ ದೇವರಹಳ್ಳಿ ಸಮೀಪ ನಡೆದಿದೆ.
ಮೃತ ಯುವಕನನ್ನು ಭದ್ರಾವತಿ ತಾಲೂಕಿನ ರಂಗನಾಥಪುರ ನಿವಾಸಿ 20 ವರ್ಷದ ರಾಕೇಶ್ ಎಂದು ಗುರುತಿಸಲಾಗಿದೆ.
ರಂಗನಾಥಪುರದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಗಣೇಶೋತ್ಸವದಲ್ಲಿ ರಾಕೇಶ್ ಭಾಗವಹಿಸಿದ್ದನು. ಭಾನುವಾರ ಸಂಜೆ ರಂಗನಾಥಪುರದಿಂದ ಗಣೇಶ ಮೂರ್ತಿ ವಿಸರ್ಜನೆಗಾಗಿ ಮೆರವಣಿಗೆ ಆರಂಭವಾಗಿತ್ತು. ಮೆರವಣಿಗೆಯು ರಾತ್ರಿ ಸುಮಾರು 1 ಗಂಟೆ ವೇಳೆಗೆ ದೇವರಹಳ್ಳಿ ಕೆರೆಯ ಬಳಿ ತಲುಪಿತ್ತು.
Bhadravathi : ಅಗ್ನಿಶಾಮಕ ಸಿಬ್ಬಂದಿ ಶೋಧ
ಗಣೇಶ ಮೂರ್ತಿಯನ್ನು ಕೆರೆಯಲ್ಲಿ ವಿಸರ್ಜಿಸುವ ಸಂದರ್ಭದಲ್ಲಿ ರಾಕೇಶ್ ಆಕಸ್ಮಿಕವಾಗಿ ಕಾಲು ಜಾರಿ ನೀರಿಗೆ ಬಿದ್ದಿದ್ದಾನೆ. ನೀರಿನಲ್ಲಿ ಮುಳುಗಿದ ರಾಕೇಶ್‌ಗಾಗಿ ತಕ್ಷಣವೇ ಅಗ್ನಿಶಾಮಕ ಸಿಬ್ಬಂದಿ ಶೋಧ ಕಾರ್ಯಾಚರಣೆ ಆರಂಭಿಸಿದರು.
ಸತತ ಶೋಧ ಕಾರ್ಯಾಚರಣೆಯ ಬಳಿಕ ಸೋಮವಾರ ಬೆಳಗಿನ ಜಾವ ರಾಕೇಶ್‌ನ ಮೃತದೇಹ ಕೆರೆಯಲ್ಲಿ ಪತ್ತೆಯಾಗಿದೆ. ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಭದ್ರಾವತಿ ತಾಲೂಕು ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.
Also read>> ಚರಂಡಿಯ ದುರ್ವಾಸನೆಗೆ ಹೈರಾಣಾದ ಪಾಮನಕಲ್ಲೂರು: ಅಧಿಕಾರಿಗಳಿಗೆ ಗ್ರಾಮಸ್ಥರ ಖಡಕ್ ಎಚ್ಚರಿಕೆ
ಈ ಘಟನೆ ಸಂಬಂಧ ಭದ್ರಾವತಿಯ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಗಣೇಶ ಮೂರ್ತಿ ವಿಸರ್ಜನೆ ವೇಳೆ ನಡೆದ ಈ ದುರಂತದಿಂದ ರಂಗನಾಥಪುರದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 









