ಭದ್ರಾವತಿ: ತಾಲ್ಲೂಕು ಆರೋಗ್ಯ ಇಲಾಖೆ ಸಿಬ್ಬಂದಿಗಳು ನಗರದ ವಿವಿಧ ಪ್ರಮುಖ ರಸ್ತೆಗಳಲ್ಲಿನ ಅಂಗಡಿಗಳ ಮೇಲೆ ದಾಳಿನಡೆಸಿ ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ ಮುಂತಾದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಅಂಗಡಿಯ ಮಾಲಿಕರ ಮೇಲೆ ಪ್ರಕರಣ ದಾಖಲಿಸಿದರು.
ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಎಂ.ಆರ್. ಗಾಯತ್ರಿ ರವರ ನೇತೃತ್ವದಲ್ಲಿ ನಗರದ ಸಿಎನ್ ರಸ್ತೆ, ತರೀಕೆರೆ ರಸ್ತೆ, ರೈಲ್ವೆ ಸ್ಟೇಷನ್ ಮುಂಭಾಗ ಹಾಗೂ ಬಿ.ಹೆಚ್. ರಸ್ತೆಗಳಲ್ಲಿನ ವಿವಿಧ ಅಂಗಡಿಗಳ ಮೇಲೆ ದಾಳಿ ನಡೆಸಲಾಯಿತು. ಶಾಲಾ ಕಾಲೇಜು ಆವರಣದ 100 ಗಜದ ಅಂತರದೊಳಗೆ ಸಿಗರೇಟ್, ಗುಟ್ಕಾ ಮತ್ತು ತಂಬಾಕು ಉತ್ಪನ್ನಗಳನ್ನು ಮಾರಾಟ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುತ್ತಿರುವುದನ್ನು ಪತ್ತೆಹಚ್ಚಿ ತಂಬಾಕು ನಿಯಂತ್ರಣ ಕಾನೂನು ಕೊಟ್ಪಾ 2003 ರ ಕಾಯ್ದೆಯ ಅಡಿಯಲ್ಲಿ 102 ಪ್ರಕರಣಗಳನ್ನು ದಾಖಲಿಸಿಕೊಂಡು ಒಟ್ಟು 7,000 ರೂ ದಂಡವನ್ನು ವಸೂಲಿ ಮಾಡಲಾಯಿತು.
ತಂಬಾಕು ಸೇವನೆಯಿಂದ ಯಾವರೀತಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿ ಸಾವು ಸಂಭವಿಸುತ್ತದೆ ಮತ್ತು ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆಯ ಮೇಲೆ ಜಾರಿಯಿರುವ ಕಾನೂನುಗಳ ಉಲ್ಲಂಘನೆ ಯಾದರೆ ಏನು ಕ್ರಮ ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ ಮತ್ತು ತಂಬಾಕು ನಿಯಂತ್ರಣ ಕಾನೂನು ರೀತಿ ಪಾಲಿಸಬೇಕಾದ ಕ್ರಮಗಳ ಕುರಿತು ಮಾಹಿತಿಯ ಕರಪತ್ರಗಳನ್ನು ವಿತರಿಸುವ ಮೂಲಕ ನಾಗರೀಕರಿಗೆ ಹಾಗು ವ್ಯಾಪಾರಸ್ಥರಿಗೆ ಅರಿವು ಮೂಡಿಸಲಾಯಿತು.
ದಾಳಿಯ ಸಂಧರ್ಭದಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಛೇರಿಯಿಂದ ಹಿರಿಯ ಆರೋಗ್ಯ ಸಹಾಯಕ ನೀಲೇಶ್ ರಾಜ್, ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಹಾಲಸ್ವಾಮಿ, ಕಿರಿಯ ಆರೋಗ್ಯ ಸಹಾಯಕ ಬಸವರಾಜ್, ಸೋಮಶೇಖರ್, ಹರೀಶ್, ಶಶಿಕುಮಾರ್, ಸುನೀಲ್ ಕುಮಾರ್ ಹಾಗೂ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಜಿ.ಕೆ. ರವಿರಾಜ್ ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post