ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಇಲ್ಲಿನ ಸಿಎನ್ ರಸ್ತೆಯಲ್ಲಿರುವ ಕೆಎಮ್‌ಸ್ ಸಿಲ್ಕ್ಸ್ ಅಂಡ್ ಸ್ಯಾರಿಸ್ ಬಟ್ಟೆ ಅಂಗಡಿಯಲ್ಲಿ ಭಾರೀ ಅಗ್ನಿ ಅವಘಡ ಸಂಭವಿಸಿದ್ದು, ಸ್ವಲ್ವದರಲ್ಲೇ ದೊಡ್ಡ ಅನಾಹುತವೊಂದು ತಪ್ಪಿದೆ.
ಸಿಎನ್ ರಸ್ತೆಯ ಮಾಧವಾಚಾರ್ ಸರ್ಕಲ್ ಬಳಿಯಲ್ಲೇ ಇರುವ ಬಟ್ಟೆ ಅಂಗಡಿಯಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ಇದರ ಜ್ವಾಲೆಗೆ ಸಂಪೂರ್ಣ ಅಂಗಡಿ ಸುಟ್ಟು ಕರಕಲಾಗಿದೆ. ಪರಿಣಾಮವಾಗಿ ಲಕ್ಷಾಂತರ ರೂ. ಮೌಲ್ಯದ ಬಟ್ಟೆಗಳು ಅಗ್ನಿಗೆ ಆಹುತಿಯಾಗಿವೆ. ಬೆಂಕಿಯ ಜ್ವಾಲೆ ಇದರ ಪಕ್ಕದಲ್ಲೇ ಇರುವ ದಿನಸಿ ಅಂಗಡಿಗೂ ತಾಕಿದ್ದು, ಇದರ ಶಾಖಕ್ಕೆ ಫ್ಯಾನ್ ಮತ್ತು ಲೈಟ್‌ಗಳು ಕರಗಿಹೋಗಿವೆ.

ಪಕ್ಕದ ದಿನಸಿ ಅಂಗಡಿ ಮೇಲ್ಭಾಗದಲ್ಲೇ ಅದರ ಮಾಲೀಕರ ಕುಟುಂಬದವರು ವಾಸಿಸುತ್ತಿದ್ದಾರೆ. ಬೆಂಕಿ ಹೊತ್ತಿಕೊಂಡಿರುವುದು ತಿಳಿದ ನಂತರ ಬೀಗ ಒಡೆದು ಕುಟುಂಬಸ್ಥರೆಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದಾರೆ. ತೀರಾ ಇಕ್ಕಟ್ಟಿನ ಸ್ಥಳವಾಗಿರುವ ಇಲ್ಲಿ ಕೊಂಚ ವ್ಯತ್ಯಾಸವಾಗಿದ್ದರೂ ಭಾರೀ ಅನಾಹುತವೊಂದು ಸಂಭವಿಸುತ್ತಿದ್ದು, ಅದೃಷ್ಟವಶಾತ್ ದೊಡ್ಡ ದುರಂತವೊಂದು ತಪ್ಪಿದೆ. ವಿಷಯ ತಿಳಿದಾಕ್ಷಣ ಸುಮಾರು ೮ಕ್ಕೂ ಹೆಚ್ಚು ಅಗ್ನಿಶಾಮಕ ದಳದ ವಾಹನ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ, ನಿರಂತರ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಬಹುತೇಕ ಯಶಸ್ವಿಯಾಗಿದ್ದಾರೆ.
ಅಗ್ನಿ ಅನಾಹುತಕ್ಕೆ ಕಾರಣ ತಿಳಿದುಬಂದಿಲ್ಲ. ಹಳೆನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.










Discussion about this post