ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹೆಚ್ಚುತ್ತಿರುವ ಮಧುಮೇಹಕ್ಕೆ ನಮ್ಮ ತಪ್ಪು ಜೀವನ ಶೈಲಿಯೇ ಕಾರಣವಾಗಿದ್ದು, ಪ್ರಸ್ತುತ ಆಹಾರದಲ್ಲಿ ಹೆಚ್ಚುತ್ತಿರುವ ಅಧಿಕ ಶರ್ಕರ ಪಿಷ್ಠ(ಕಾರ್ಬೋಹೈಡ್ರೇಟ್) ಬಳಕೆಯನ್ನು ಕಡಿಮೆ ಮಾಡಿ ಬದಲಾಗಿ ಬೇಳೆಕಾಳುಗಳು, ತರಕಾರಿ, ಮೊಳಕೆಕಾಳು, ಹಸಿರು ಸೊಪ್ಪುಗಳನ್ನು ಸೇವಿಸುವುದು ಮತ್ತು ನಿಯಮಿತ ವ್ಯಾಯಾಮ ಹಾಗು ವೈದ್ಯರ ಸಲಹೆ ಮೇರೆಗೆ ಸೂಕ್ತಚಿಕಿತ್ಸೆ ತೆಗೆದುಕೊಳ್ಳವುದರಿಂದ ಮಧುಮೇಹ ನಿಯಂತ್ರಣ ಸಾಧ್ಯ ಎಂದು ಮಹಿಳಾ ವೇದಿಕೆ ಅಧ್ಯಕೆ ಡಾ. ವೀಣಾ ಎಸ್. ಭಟ್ ಹೇಳಿದರು.
ಅವರು ವಿಶ್ವ ಮಧುಮೇಹ ದಿನಾಚರಣೆಯ ಅಂಗವಾಗಿ ಭಾರತೀಯ ವೈದ್ಯಕೀಯ ಸಂಘ(ಐಎಂಎ) ತಾಲೂಕು ಶಾಖೆ, ಮಹಿಳಾ ಘಟಕ, ಶಿವಮೊಗ್ಗ ಮಲ್ನಾಡ್ ಆಫ್ತಾಲ್‌ಮಿಕ್ ಅಸೋಸಿಯೇಶನ್, ಸ್ತ್ರೀ ರೋಗ ತಜ್ಞರ ಸಂಘ, ಐತಾಳ್ ಚಾರಿಟೇಬಲ್ ಟ್ರಸ್ಟ್ ಮತ್ತು ಮಹಿಳಾ ಆರೋಗ್ಯ ವೇದಿಕೆ ವತಿಯಿಂದ ನಗರದ ತರೀಕೆರೆ ರಸ್ತೆಯ ನಯನ ಆಸ್ಪತ್ರೆ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ರಕ್ತದಲ್ಲಿನ ಗ್ಲೂಕೋಸ್ ಅಂಶದ ಪರೀಕ್ಷೆ, ಕಣ್ಣಿನ ಅಕ್ಷಿಪಟ್ಟಲದ ಬೇನೆ ಮತ್ತು ಮಧುಮೇಹ ತಪಾಸಣಾ ಶಿಬಿರದಲ್ಲಿ ಪಾಲ್ಗೊಂಡು ಮಾತನಾಡಿದರು.
ಮಧುಮೇಹ ನಿಯಂತ್ರಣದಿಂದ ಕಣ್ಣು, ಹೃದಯ, ನರವ್ಯೂಹ, ಮೂತ್ರಪಿಂಡ, ಕಾಲಿನ ರಕ್ತನಾಳ ಹೀಗೆ ಬಹುಅಂಗಾಗಳ ಮೇಲೆ ಉಂಟು ಮಾಡುವ ದುಷ್ಪರಿಣಾಮಗಳನ್ನು ತಡೆಗಟ್ಟಬಹುದಾಗಿದೆ ಎಂದರು.
ಐಎಂಎ ಕಾರ್ಯದರ್ಶಿ, ಮೂಳೆ ರೋಗ ತಜ್ಞ ಡಾ. ರಾಮಚಂದ್ರ ಕಾಮತ್ ಮಾತನಾಡಿ, ಮಧುಮೇಹ ಕಾಣಿಸಿಕೊಂಡವರಲ್ಲಿ ಸ್ನಾಯು ಹಾಗೂ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಬೊಜ್ಜು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟು ಮಾಡುವ ಪ್ರಮುಖ ವೈರಿಯಾಗಿದ್ದು, ಈ ಹಿನ್ನಲೆಯಲ್ಲಿ ದೇಹದ ಸಮತೂಕ ನಿರ್ವಹಣೆಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಐಎಂಎ ಉಪಾಧ್ಯಕ್ಷೆ ಡಾ. ಕವಿತಾಭಟ್ ಮಾತನಾಡಿ, ಸದ್ದಿಲ್ಲದೇ ನಮ್ಮನ್ನು ಆಕ್ರಮಿಸುವ ಮಧುಮೇಹ ಪತ್ತೆ ಹಚ್ಚಲು ಪ್ರತಿಯೊಬ್ಬರೂ ೨೫ ವರ್ಷಗಳ ನಂತರ ವಷಕ್ಕೊಮ್ಮೆಯಾದರೂ ರಕ್ತದಲ್ಲಿ ಸಕ್ಕರೆ ಪ್ರಮಾಣ ಪರೀಕ್ಷಿಸಿಕೊಳ್ಳುತ್ತಿರಬೇಕು. ಜೀವನಶೈಲಿ ಬದಲಿಸಿಕೊಳ್ಳದ್ದಿದ್ದರೆ ಬಹಳಷ್ಟು ಆರೋಗ್ಯ ಸಮಸ್ಯೆಯನ್ನು ಮುಂದಿನ ಪೀಳಿಗೆ ಅನುಭವಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮಕ್ಕಳ ತಜ್ಞ ಡಾ. ಮಲ್ಲಿಕಾರ್ಜುನ್ ಸಾಲೇರ ಮಾತನಾಡಿ, ಪ್ರಸ್ತುತ ಚಿಕ್ಕ ಮಕ್ಕಳಲ್ಲಿ ಸಹ ಮಧುಮೇಹ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಐಎಂಎ ತಾಲೂಕು ಅಧ್ಯಕ್ಷ, ನೇತ್ರ ತಜ್ಞ ಡಾ. ಕುಮಾರ ಸ್ವಾಮಿ ಮಾತನಾಡಿದರು. ಮಹಿಳಾ ಆರೋಗ್ಯ ವೇದಿಕೆ ಕಾರ್ಯದರ್ಶಿ ಡಾ. ಆಶಾ ಸ್ವಾಗತಿಸಿ ವಂದಿಸಿದರು. ೫೦ಕ್ಕೂ ಹೆಚ್ಚು ಜನರಿಗೆ ಉಚಿತ ಅಕ್ಷಿಪಟಲ ತಪಾಸಣೆ ಹಾಗೂ ರಕ್ತ ತಪಾಸಣೆ ನಡೆಸಲಾಯಿತು. ಅಲ್ಲದೆ ಸೂಕ್ತ ಸಲಹೆ ಸೂಚನೆ ನೀಡಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post