ಭದ್ರಾವತಿ: ಭದ್ರಾ ನದಿಯ ಸನಿಹದಲ್ಲೇ ಇರುವ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಈ ಭಾರಿಯ ಮಳೆಯ ಹೊಡೆತಕ್ಕೆ ಸಿಲುಕಿ ಸೋರಲು ಆರಂಭವಾಗಿದೆ.
ದೇವಾಲಯದ ಅರ್ಚಕರು ನೀಡಿರುವ ಮಾಹಿತಿಯಂತೆ, ದೇಗುಲದ ಒಳಗಿರುವ ಗರ್ಭಗುಡಿಗಳಲ್ಲಿ ನೀರು ಸೋರಿಕೆಯಾಗುತ್ತಿದ್ದು, ಇದರಿಂದ ದೇಗುಲ ಹಾನಿಯಾಗುವ ಆತಂಕ ಎದುರಾಗಿದೆ.
13ನೆಯ ಶತಮಾನದ ಈ ದೇವಾಲಯ ಹೊಯ್ಸಳರ ಶೈಲಿಯದ್ದು, ಸಂಪೂರ್ಣವಾಗಿ ಕಲ್ಲಿನಿಂದಲೇ ನಿರ್ಮಾಣವಾಗಿದೆ. ಇಲ್ಲಿನ ಲಕ್ಷ್ಮೀ ನರಸಿಂಹ ಸ್ವಾಮಿ ದೇವರ ಅನುಗ್ರಹದಿಂದ ಲಕ್ಷಾಂತರ ಮಂದಿ ಅಭಿವೃದ್ಧಿ ಹೊಂದಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಈ ಬಾರಿ ಭದ್ರಾವತಿ ಭಾರೀ ಮಳೆ ಕಂಡಿದೆ. ಈಗ ಕಳೆದ ಒಂದು ವಾರದಿಂದ ಬಹುತೇಕ ಪ್ರತಿನಿತ್ಯ ಧಾರಾಕಾರ ಮಳೆ ಸುರಿಯುತ್ತಿದ್ದು, ಪರಿಣಾಮವಾಗಿ ಈ ಐತಿಹಾಸಿಕ ದೇವಾಲಯದಲ್ಲಿ ಸೋರಿಕೆ ಉಂಟಾಗಿರುವುದು ಅರ್ಚಕರ ಹಾಗೂ ಭಕ್ತಾದಿಗಳ ಆತಂಕಕ್ಕೆ ಕಾರಣವಾಗಿದೆ.
ಅಲ್ಲದೇ ದೇವಾಲಯ ಹೊರ ಮೇಲ್ಭಾಗದಲ್ಲಿ ಗಿಡಗಂಟೆಗಳು ಬೆಳೆದುಕೊಂಡಿದ್ದು, ಇದನ್ನು ತೆರವುಗೊಳಿಸಬೇಕಿದೆ. ಮೇಲ್ಬಾಗದಲ್ಲಿನ ಕಲ್ಲುಗಳು ಕೊಂಚ ಜರುಗಿದ್ದು, ಈ ಐತಿಹಾಸಿಕ ದೇಗುಲಕ್ಕೆ ಭಾರೀ ಹಾನಿಯಾಗುವ ಮುನ್ನ ಸಂರಕ್ಷಣೆಯಾಗಬೇಕಿದೆ.
ಈ ಹಿನ್ನೆಲೆಯಲ್ಲಿ ಮುಜರಾಯಿ ಇಲಾಖೆ ಅಧಿಕಾರಿಗಳು, ಪುರಾತತ್ವ ಇಲಾಖೆ ಅಧಿಕಾರಿಗಳು ತತಕ್ಷಣವೇ ಇತ್ತ ಗಮನ ಹರಿಸಿ, ನೀರು ಸೋರಿಕೆ ತಡೆಗೆ ಕ್ರಮ ಕೈಗೊಳ್ಳುವ ಜೊತೆಯಲ್ಲಿ ವೈಜ್ಞಾನಿಕ ರೀತಿಯಲ್ಲಿ ದೇವಾಲಯದ ಸಂರಕ್ಷಣೆಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ.
Discussion about this post