ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಗಂಟೆ 2.13 ಆದರೂ ನಗರದಲ್ಲಿ ಟ್ರಾಫಿಕ್ ಜಾಮ್, ಅಂಗಡಿ ಮುಂಗಟ್ಟಗಳ ವ್ಯಾಪಾರ ಸಲೀಸಾಗಿ ನಡೆಯುತ್ತಿತ್ತು. ಆದರೆ, ಯಾವಾಗ ಪೊಲೀಸರು ಅಖಾಡಕ್ಕಿಳಿದರೋ ನಾ ಮೊದಲು, ತಾ ಮೊದಲು ಎಂಬಂತೆ ಅಂಗಡಿಗಳನ್ನು ಬಂದ್ ಆದವು.
ಇದು, ಜಿಲ್ಲಾ ಲಾಕ್ ಡೌನ್ ಮೊದಲ ದಿನ ನಗರದಲ್ಲಿನ ಚಿತ್ರಣ.
ಹೌದು… ಕೊರೋನಾ ವೈರಸ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಇಂದಿನಿಂದ ಪ್ರತಿದಿನ ಮಧ್ಯಾಹ್ನ 2 ಗಂಟೆ ನಂತರ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಅದರೆ, ಮೊದಲ ದಿನವೇ ಜನರು ಇದಕ್ಕೆ ತಲೆಕೆಡಿಸಿಕೊಂಡಿರಲಿಲ್ಲ. ಚನ್ನಗಿರಿ ರಸ್ತೆ, ತರೀಕೆರೆ ರಸ್ತೆ, ಬಿ.ಎಚ್. ರಸ್ತೆ ಸೇರಿದಂತೆ ನಗರದ ಪ್ರಮುಖ ಕಡೆಗಳಲ್ಲಿ ಪರಿಸ್ಥಿತಿ ಎಂದಿನಂತೆಯೇ ಇತ್ತು.
ಆದರೆ, ಯಾವಾಗ ಪೊಲೀಸರು ಅಖಾಡಕ್ಕಿಳಿದರೋ ಧಾವಂತದಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಲಾಯಿತು. ಅಲ್ಲಿಯವರೆಗೂ ಸಾಮಾನ್ಯವಾಗಿದ್ದ ವಾಹನ ಸಂಚಾರ ಒಮ್ಮಿಂದೊಮ್ಮೆಲೇ ಟ್ರಾಫಿಕ್ ಜಾಮ್ ಆಗುವ ಹಂತಕ್ಕೆ ಬಂದಿತು. ಏಕಾಏಕಿ ಜನರು ಮನೆಗಳಿಗೆ ಧಾವಿಸಲು ಆರಂಭಿಸಿದ ಕಾರಣ ಚನ್ನಗಿರಿ ರಸ್ತೆ, ಮಾಧವಾಚಾರ್ ಸರ್ಕಲ್’ನಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಆಗಿತ್ತು.
ಹರಸಾಹಸ ಪಟ್ಟ ಪೊಲೀಸರು
ಜಿಲ್ಲಾಡಳಿತ ಅರ್ಧದಿನ ಲಾಕ್ ಡೌನ್ ಘೋಷಣೆ ಮಾಡಿದ್ದರೂ, ಜನ ಹಾಗೂ ವ್ಯಾಪಾರಸ್ಥರು ಮಾತ್ರ ಇದಕ್ಕೆ ಕ್ಯಾರೇ ಎನ್ನುತ್ತಿರಲಿಲ್ಲ. ಆದರೆ, ಆದೇಶದಂತೆ ಅಂಗಡಿ ಮುಂಗಟ್ಟು ಮುಚ್ಚಿಸಲು ಪೊಲೀಸರು ಹರಸಾಹಸ ಪಟ್ಟರು. ಒಂದು ಹಂತಕ್ಕೆ ಪ್ರತಿ ಅಂಗಡಿ ಮುಂದೆ ನಿಂತು ಬಂದ್ ಮಾಡುವಂತೆ ಘೋಷಣೆ ಕೂಗಬೇಕಾಯಿತು.
ಆಯುಕ್ತರೇ ಕಠಿಣ ಕ್ರಮ ಕೈಗೊಳ್ಳಿ
ಜಿಲ್ಲಾಡಳಿತದ ಆದೇಶವಿದ್ದರೂ ಸಹ ಕ್ಯಾರೇ ಎನ್ನದೇ 2.15 ಆದರೂ ಅಂಗಡಿಗಳನ್ನು ಮುಚ್ಚದೇ ತಾತ್ಸಾರ ಮಾಡುವ ವ್ಯಾಪಾರಸ್ಥರ ವಿರುದ್ಧ ನಗರಸಭೆ ಹಾಗೂ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕಿದೆ.
4 ಗಂಟೆ ನಂತರ?
ಇನ್ನು, 3 ಗಂಟೆ ವೇಳೆಗೆ ನಗರದ ವ್ಯಾಪಾರ ವಹಿವಾಟು ಸಂಪೂರ್ಣ ಸ್ಥಗಿತಗೊಂಡರೂ ಜನರ ಓಡಾಟ ಮಾತ್ರ ನಡೆದಿತ್ತು. ಅನಾವಶ್ಯಕವಾಗಿ ಓಡಾಡುವವ ಸಂಖ್ಯೆಯೂ ಸಹ ಕಂಡು ಬಂದಿದ್ದು, ಪೊಲೀಸರು ಅಂತಹವನ್ನು ತಡೆದು ಎಚ್ಚರಿಕೆ ನೀಡುತ್ತಿದ್ದುದು ಕಂಡು ಬಂದಿತು.
ಜನರೇ ಅರಿತುಕೊಳ್ಳಬೇಕು
ಭದ್ರಾವತಿ ಮಟ್ಟಿಗೆ ನೋಡುವುದಾದರೆ ನಿನ್ನೆಯವೆರಗೂ 48 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಆದರೂ ಸಹ ಜನರು ಇದನ್ನು ಗಂಭೀರವಾಗಿ ಪರಿಗಣಿಸದೇ ತಾತ್ಸಾರ ಮಾಡುತ್ತಿರುವುದು ಆತಂಕಕಾರಿ ಸಂಗತಿಯಾಗಿದೆ.
ಜನರ ಜೀವ ಉಳಿಸುವ ದೃಷ್ಠಿಯಿಂದಲೇ ಜಿಲ್ಲಾಡಳಿತ ಅರ್ಧದಿನ ಲಾಕ್ ಡೌನ್ ಘೋಷಣೆ ಮಾಡಿದೆ ಎಂಬುದನ್ನು ಜನ ಸಾಮಾನ್ಯರು ಅರ್ಥ ಮಾಡಿಕೊಂಡು, ಸಾಧ್ಯವಾದಷ್ಟು ಮನೆಯಲ್ಲೇ ಇರಬೇಕು. ಜನರಿಗಾಗಿ ನಗರಸಭೆ, ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಹಗಲಿರುಳು ಶ್ರಮಿಸುತ್ತಿದೆ. ಪ್ರಮುಖವಾಗಿ ನಗರಸಭೆ ಆಯುಕ್ತರು, ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳ ಶ್ರಮವನ್ನು ಒಮ್ಮೆ ನೋಡಿ. ಅವರುಗಳಿಗೂ ಜೀವವಿದೆ, ಅವರಿಗೂ ಕೊರೋನಾ ತಗುಲುತ್ತದೆ. ಆದರೆ, ಅದನ್ನು ಮೀರಿ ಅವರುಗಳು ನಮ್ಮ ಹಿತಕ್ಕಾಗಿ ತಾವು ಅಪಾಯದಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸಹಕಾರ ನೀಡಿ ಎಂಬುದು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದ ಮನವಿಯಾಗಿದೆ.
Get In Touch With Us info@kalpa.news Whatsapp: 9481252093
Discussion about this post