ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಇಂದು ಮುಂಜಾನೆ ಕರ್ತವ್ಯ ನಿರತರಾಗಿದ್ದ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ವಿಐಎಸ್’ಎಲ್ ಗುತ್ತಿಗೆ ನೌಕರ ಅಂಥೋಣಿ ಅವರ ಕುಟುಂಬದಲ್ಲಿ ಇಬ್ಬರಿಗೆ ಗುತ್ತಿಗೆ ಉದ್ಯೋಗ ಹಾಗೂ 10 ಲಕ್ಷ ರೂ. ಪರಿಹಾರ ನೀಡಲು ತೀರ್ಮಾನಿಸಲಾಗಿದೆ.
ಅಂಥೋಣಿಯವರು ಇಂದ ಮುಂಜಾನೆ ಕರ್ತವ್ಯದಲ್ಲಿದ್ದ ವೇಳೆಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ, ಕುಟುಂಬಸ್ಥರು ಹಾಗೂ ಕಾರ್ಮಿಕರು ವಿಐಎಸ್’ಎಲ್ ಕಾರ್ಖಾನೆಯಲ್ಲಿ ಪ್ರತಿಭಟನೆ ನಡೆಸಿ, ಮೃತರ ಕುಟುಂಬಸ್ಥರಿಗೆ ಉದ್ಯೋಗ ಹಾಗೂ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದ್ದರು.
ಈ ಕುರಿತಂತೆ ಭಾರೀ ವಾಗ್ವಾದವೂ ಸಹ ನಡೆದಿತ್ತು. ಈ ನಡುವೆ ಮಧ್ಯಸ್ಥಿಕೆ ವಹಿಸಿ ಸಂಧಾನ ಮಾತುಕತೆ ನಡೆಸಿದ ಶಾಸಕ ಬಿ.ಕೆ. ಸಂಗಮೇಶ್ವರ ಅವರ ಪ್ರಯತ್ನ ಫಲ ನೀಡಿದೆ.
ಮೃತರ ಪತ್ನಿ ಹಾಗೂ ಪುತ್ರಿಗೆ ಗುತ್ತಿಗೆ ಆಧಾರದಲ್ಲಿ ಉದ್ಯೋಗ ನೀಡುವುದು ಹಾಗೂ ಗುತ್ತಿಗೆದಾರರು ಮೃತರ ಕುಟುಂಬಸ್ಥರಿಗೆ 10 ಲಕ್ಷ ರೂ. ಪರಿಹಾರ ನೀಡಬೇಕು ಎಂಬುದಾಗಿ ಅಂತಿಮ ತೀರ್ಮಾನ ಕೈಗೊಳ್ಳಲಾಗಿದ್ದು, ಇದಕ್ಕೆ ಗುತ್ತಿಗೆದಾರರೂ ಸಹ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇನ್ನು, ಗುತ್ತಿಗೆದಾರರು ಮೃತರ ಕುಟುಂಬಸ್ಥರಿಗೆ ಪರಿಹಾರ ನೀಡುವುದು ಕೊಂಚ ವಿಳಂಬವಾಗುತ್ತದೆ. ಹೀಗಾಗಿ, ಕುಟುಂಬಸ್ಥರ ನೆರವಿಗೆ ಧಾವಿಸಿದ ಶಾಸಕ ಸಂಗಮೇಶ್ವರ್ ಅವರು ತತಕ್ಷಣವೇ 10 ಲಕ್ಷ ರೂ.ಗಳ ನಗದನ್ನು ಮೃತರ ಕುಟುಂಬಸ್ಥರಿಗೆ ವೈಯಕ್ತಿಕವಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.
ಸಂಧಾನ ಸಭೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಮೃತರ ಪಾರ್ಥಿವ ಶರೀರವನ್ನು ಕುಟುಂಬಸ್ಥರು ಪಡೆದುಕೊಂಡಿದ್ದು, ಅಂತಿಮ ವಿಧಿವಿಧಾನಗಳು ನಡೆಸಿದ್ದಾರೆ.
ಇನ್ನು, ಕಾರ್ಮಿಕರ ಪ್ರತಿಭಟನೆಯ ನೇತೃತ್ವವನ್ನು ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡ ಪುತ್ರ ಅಜಿತ್ ಗೌಡ ಅವರು ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post