ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಮಾಜಿ ಶಾಸಕ ನನ್ನ ಪತಿ ಎಮ್.ಜೆ. ಅಪ್ಪಾಜಿ ಗೌಡರ ನಿಧನದೊಂದಿಗೆ ಭದ್ರಾವತಿಯ ಜೆಡಿಎಸ್ ಕಥೆ ಮುಗಿಯಿತು ಎಂದವರಿಗೆ ನಗರಸಭೆಯ ನಿನ್ನೆ ಫಲಿತಾಂಶ ಉತ್ತರ ನೀಡಿದೆ ಎಂದು ಶಾರದಾ ಅಪ್ಪಾಜಿ ಗೌಡ ಹೇಳಿದರು.
ಫಲಿತಾಂಶದ ಹಿನ್ನಲೆಯಲ್ಲಿ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅಪ್ಪಾಜಿಗೌಡರು ನಡೆದ ಹಾದಿ ಅವರು ತೋರಿದ ಮಾರ್ಗದರ್ಶನದಲ್ಲೇ ನಾವು ಮುಂದೆಯೂ ನಡೆಯಲಿದ್ದೇವೆ. ಹಿಂದಿನಂತೆಯೇ ಮುಂದಿನ ದಿನಗಳಲ್ಲಿಯೂ ವ್ಯವಸ್ಥಿತವಾಗಿ ಕಾರ್ಯನಿರ್ವಹಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಧಿಕಾರ ಹಿಡಿಯುದೇ ನಮ್ಮ ಗುರಿ ಎಂದರು.

ಅಪ್ಪಾಜಿಗೌಡರ ಅನುಪಸ್ಥಿತಿಯಲ್ಲೂ ನಮ್ಮ ಬಗ್ಗೆ ಭರವಸೆ ಇಟ್ಟು 11 ಸ್ಥಾನವನ್ನು ನೀಡಿರುವ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಹಾಗೂ ಜನರ ಋಣ ತೀರಿಸುವ ಸೇವೆಗೆ ನಾವು ಸದಾ ಸಿದ್ಧರಿದ್ದೇವೆ ಎಂದರು.
ಜೆಡಿಎಸ್ ತಾಲೂಕು ಅಧ್ಯಕ್ಷ ಕರುಣಾ ಮೂರ್ತಿ ಮಾತನಾಡಿ, ಅಪ್ಪಾಜಿ ಗೌಡರ ಅನುಪಸ್ಥಿತಿಯಲ್ಲೂ ನಾವು ಸಾಕಷ್ಟು ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಿದ್ದೇವೆ. ಆದರೂ 11 ಸ್ಥಾನಗಳಲ್ಲಿ ಮಾತ್ರ ಗೆದ್ದಿದ್ದು, ಉಳಿದ ಸ್ಥಾನಗಳನ್ನು ಕಳೆದುಕೊಂಡಿದ್ದು, ಏಕೆ ಎಂಬುದನ್ನು ಪರಾಮರ್ಶಿಸಿಕೊಳ್ಳುತ್ತೇವೆ ಎಂದರು.

ಪ್ರಮುಖರಾದ ಎಸ್. ಕುಮಾರ್ ಮಾತನಾಡಿ, ಕೋವಿಡ್-19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ತೊಡಕಾಯಿತು. ಇದು ಸಹ ನಮ್ಮ ಪಕ್ಷದ ಹಿನ್ನೆಡೆಗೆ ಕಾರಣವಾಯಿತು ಎಂದರು.
ನಾವು ಈ ಹಿಂದೆ ಗಳಿಸಿಕೊಂಡಿದ್ದ ಸ್ಥಾನಗಳು ಈ ಬಾರಿ ಕೈತಪ್ಪಿದ್ದೇಕೆ ಎಂಬುದರ ಪರಾಮರ್ಶೆ ನಡೆಸಿಕೊಳ್ಳುತ್ತೇವೆ. ಸಾಮೂಹಿಕ ನಾಯಕತ್ವದಲ್ಲಿ ಪಕ್ಷವನ್ನು ಮುಂದಿನ ದಿನಗಳಲ್ಲಿ ಸಂಘಟಿಸಲಿದ್ದೇವೆ. ಹೊಸಮನೆ ಭಾಗದಲ್ಲಿ ನಮ್ಮ ಪಕ್ಷಕ್ಕೆ ಹೆಚ್ಚಿನ ಒಲವಿಲ್ಲ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ಪಕ್ಷವನ್ನು ಬೇರುಮಟ್ಟದಿಂದ ವಿಸ್ತರಿಸುವ ಯೋಜನೆ ಹೊಂದಿದ್ದೇವೆ ಎಂದರು.

ಸುದ್ಧಿಗೋಷ್ಠಿಯಲ್ಲಿ ಮಣಿಶೇಖರ್, ಶಂಖರಪ್ಪ, ಮೈಲಾರಪ್ಪ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















