ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಮೋದಿಯವರು ಹೋದಲೆಲ್ಲಾ ಕುಟುಂಬ ರಾಜಕಾರಣ ವಿರುದ್ಧ ಮಾತನಾಡುತ್ತಾರೆ. ಆದರೆ ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಹಿಡಿತದಲ್ಲಿದೆ. ಇದರಿಂದ ರಾಜ್ಯದ ಜನ ಕಾರ್ಯಕರ್ತರು ನೋವಿನಲ್ಲಿದ್ದಾರೆ ಪಕ್ಷವನ್ನು ಒಂದು ಕುಟುಂಬದಿಂದ ಹೊರ ತಂದು ಕಾರ್ಯಕರ್ತರಿಗೆ ನೆಮ್ಮದಿ ತರಲು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ #K S Eshwarappa ಹೇಳಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪರವರನ್ನು ಬೆಂಬಲಿಸಿ ಬಿ.ಆರ್.ಪಿಯಲ್ಲಿ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಯೋಜಿಸಲಾಗಿದ್ದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಪ್ರಪಂಚದಲ್ಲಿ ಸ್ತ್ರೀಯರನ್ನು ಮಾತೃ ಸ್ವರೂಪದಲ್ಲಿ ಕಾಣುವುದು ಭಾರತದಲ್ಲಿ ಮಾತ್ರ ತಾಯಿ ಹರಸಿ ಆರಂಭ ಮಾಡುವ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ ಆದ್ದರಿಂದ ತಾಯಂದಿರ ಕೈನಲ್ಲಿ ದೀಪ ಬೆಳಗಿಸಿ ಸಾರ್ವಜನಿಕ ಸಭೆ ಆರಂಭ ಮಾಡಿದ್ದೇನೆ. ಶಿವಮೊಗ್ಗ ಲೋಕ ಸಭಾ ಕ್ಷೇತ್ರದ ಎಲ್ಲಾ ಭಾಗಗಳಲ್ಲಿ ಭೇಟಿ ನೀಡಿದ್ದೇನೆ. ಹೋದಲೆಲ್ಲಾ ಜನರು ನನ್ನ ಸ್ಪರ್ಧೆಯನ್ನು ಬೆಂಬಲಿ ನಿಮ್ಮನ್ನು ಗೆಲ್ಲಿಸುವುದಾಗಿ ಆಶೀರ್ವಾದ ಮಾಡುತ್ತಿದ್ದಾರೆ. ನೀವು ಸಹ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ #PM Modi ಮಾಡಲು ಸಹಕಾರ ನೀಡಿ ಎಂದು ಮನವಿ ಮಾಡಿದರು.
Also read: ರಾಜ್ಯಕ್ಕೆ 3,454 ಕೋಟಿ ರೂ. ಬರ ಪರಿಹಾರ ಘೋಷಿದ ಕೇಂದ್ರ ಸರ್ಕಾರ
ದೇಶದಲ್ಲಿ ಹಿಂದುತ್ವದ ಉಳಿವಿಗಾಗಿ ಅಟಲ್ ಬಿಹಾರಿ ವಾಜಪೇಯಿ, #Atal Bihari Vajapayee ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿಯವರಂತಹ ಮಹಾನ್ ನಾಯಕರು ಪಕ್ಷ ಸಂಘಟನೆ ಮಾಡಲು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಹಿಂದುತ್ವದ ಮೂಲ ಉದ್ದೇಶ ಮಹಿಳೆಯರಿಗೆ ಗೌರವ ಸ್ಥಾನ ಕೊಡುವುದು. ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಹೋದ ವಿಧ್ಯಾರ್ಥಿನಿಯನ್ನು ಕಾಲೇಜಿನ ಒಳಗೆ ನುಗ್ಗಿ ಕೊಲೆ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತರಲು ಅನೇಕ ಮಹಾ ಪುರುಷರು ಪ್ರಾಣ ತ್ಯಾಗ ಮಾಡಿ ಸ್ವರ್ಗದಲ್ಲಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ಹುಬ್ಬಳ್ಳಿ ಪ್ರಕರಣದಂತಹ ಘಟನೆಗಳು ಸ್ವರ್ಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೋವು ತಂದಿದೆ ಎಂದರು.
ಮುಗ್ದ ಹುಡುಗಿಯರಿಗೆ ಪ್ರೀತಿ ತೋರಿಸಿ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ರಾಜ್ಯದ ಮುಖ್ಯಮಂತ್ರಿ ಇದು ಲವ್ ಜಿಹಾದ್ ಪ್ರಕರಣವಲ್ಲ ಎಂದು ಹೇಳಿದ್ದಾರೆ. ಕೊಲೆ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದಲ್ಲಿ ಒತ್ತಡ ಹೆಚ್ಚಾದಾಗ ಸಿಐಡಿಗೆ ಪ್ರಕರಣ ವಹಿಸಿದ್ದಾರೆ. ಸಿಐಡಿ ಅಧಿಕಾರಿಗಳು ಮುಖ್ಯಮಂತ್ರಿ ಹೇಳಿದಂತೆ ವರದಿ ನೀಡುತ್ತಾರೆ ಆದ್ದರಿಂದ ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.
ಹೇಡಿಗಳ ರೀತಿ ಹಿಂದು ಯುವಕರನ ಮೇಲೆ ಹಲ್ಲೆ ಮಾಡಿ ಓಡಿ ಹೋಗುತ್ತಾರೆ, ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಕರುವನ್ನು ಕಳ್ಳತನ ಮಾಡುತ್ತಿದ್ದಾರೆ ಅದನ್ನು ತಡೆಯಲು ಹೋದ ಯುವಕರ ಮೇಲೆ ರಾಜ್ಯ ಸರ್ಕಾರ ಕೇಸ್ ಹಾಕುತ್ತಿದೆ. ನಾವೇನು ಪಾಕಿಸ್ಥಾನದಲ್ಲಿದ್ದೇವಾ.
ಹೆಣ್ಣಿಗೆ ಗೌರವ ಸಿಗಬೇಕು ಗೋವಿಗೆ ಪೂಜೆಯಾಗಬೇಕು, ಮಂದಿರಗಳು ಉಳಿಸಬೇಕು ಹಿಂದುತ್ವ ಬೆಳೆಯಬೇಕು ಎಂಬುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದರು.
ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ಬೇರೆ ಬೇರೆ ದೇಶಗಳಿಂದ ನನಗೆ ಬೆದರಿಕೆ ಕರೆ ಬರುತ್ತಿದೆ, ಫೋನ್ ಮೂಲಕ ಬೆದರಿಕೆ ಹಾಕಬೇಡಿ ಧೈರ್ಯ ಇದ್ದರೆ ಮುಂದೆ ಬನ್ನಿ ಈ ರೀತಿ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ ಎಂದರು.
ಕಾಶ್ಮೀರದ ಲಾಲ್ ಚೌಕದಲ್ಲಿ ಹಾಕಲಾಗಿದ್ದ ಪಾಕಿಸ್ಥಾನ ಧ್ವಜ ತೆಗೆದು ಹಿಂದೂಸ್ಥಾನ ಧ್ವಜವನ್ನು ಏರಿಸಲು ಮೋದಿ ಕರೆ ಮೇರೆಗೆ ಲಾಲ್ ಚೌಕ್ ಗೆ ಹೋಗಿದ್ದೆ ಅಲ್ಲಿಂದ ನನಗೆ ಮೋದಿಯವರ ಜೊತೆ ಒಡನಾಟ ಆರಂಭವಾಯಿತು. 500ವರ್ಷಗಳ ನಂತರ ರಾಮ ಮಂದಿರ ವಿವಾದ ಬಗೆಹರಿಯಿತು ರಾಮ ಮಂದಿರ ನಿರ್ಮಾಣ ಮಾಡಲು ಮೋದಿ ಬರಬೇಕಾಯಿತು. ಕಾಶಿ ವಿಶ್ವನಾಥ ದೇವಸ್ಥಾನ ಜಾಗದಲ್ಲಿ ಮಸೀದಿ ನಿರ್ಮಾಣ ಮಾಡಿದ್ದಾರೆ, ಮಸೀದಿ ಜಾಗದಲ್ಲಿ ಶಿವ ಲಿಂಗ ಇದೆ ಅದಕ್ಕೆ ಪೂಜೆ ಮಾಡಲು ಅವಕಾಶ ಕೊಡಿ ಎಂದು ಮಹಿಳೆಯರು ಕೋರ್ಟ್ ಮೊರೆ ಹೋದ.ರು ಮಸೀದಿ ಜಾಗದಲ್ಲಿ ಮಂದಿರ ಇದ್ದ ಕುರುಹುಗಳ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಪೂಜೆ ಸಲ್ಲಿಸಲು ಕೋರ್ಟ್ ಅನುಮತಿ ಕೊಟ್ಟಿದೆ. ಶ್ರೀ ಕೃಷ್ಣ ಜನ್ಮಸ್ಥಳ ಮಥುರಾದಲ್ಲಿ ಸಹ ಮಸೀದಿ ನಿರ್ಮಾಣವಾಗಿದೆ ಇಲ್ಲಿಯೂ ಸಹ ಹಿಂದುಗಳಿಗೆ ನ್ಯಾಯ ಸಿಕ್ಕಿ ಮಥುರಾದಲ್ಲಿ ಕೃಷ್ಣ ದೇವಸ್ಥಾನ ನಿರ್ಮಾಣವಾಗುವ ವಿಶ್ವಾಸ ಇದೆ ಎಂದರು.
ಸಭೆಯಲ್ಲಿ ಮಾಳೆನ ಹಳ್ಳಿ, ಸಿಂಗನ ಮನೆ, ಶಂಕರಘಟ್ಟ, ಗ್ಯಾರೇಜ್ ಕ್ಯಾಂಪ್ ಗ್ರಾಮಸ್ಥರು ಭಾಗಿಯಾಗಿದ್ದರು. ಕಾರ್ಯಕ್ರಮದಲ್ಲಿ ಮುಖಂಡರಾದ ರಂಗೋಜಿರಾವ್, ಬಿ.ಡಿ. ಈಶ್ವರಪ್ಪ, ಚೌಡಪ್ಪ, ಮಹೇಶ್ ಕುಮಾರ್, ವೇದಮೂರ್ತಿ, ನಾರಾಯಣಪ್ಪ, ಪ್ರಭಾಕರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post