ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ದಶಕಗಳ ಕಾಲ ತೆರಿಗೆ ಪಾವತಿಸದೇ ಬಾಕಿ ಉಳಿಸಿಕೊಂಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ 20ನೆಯ ತಾರೀಖಿನ ಒಳಗಾಗಿ ನಗರಸಭೆಗೆ 18 ಲಕ್ಷ ರೂ.ಗಳನ್ನು ಪಾವತಿಸುವಂತೆ ಬಸವೇಶ್ವರ ಸಭಾ ಭವನದ ಮಾಲೀಕರಿಗೆ ರಾಜ್ಯ ಹೈಕೋರ್ಟ್ ಆದೇಶ ನೀಡಿದೆ.
ಈ ಕುರಿತಂತೆ ಮಾಹಿತಿ ನೀಡಿರುವ ನಗರಸಭೆ ಆಯುಕ್ತ ಮನೋಹರ್ ಅವರು, 1997-98ರಲ್ಲಿ ವಸತಿ ಉದ್ದೇಶಕ್ಕಾಗಿ ಸಿದ್ದಾರೂಢನಗರ ಈ ಜಾಗವನ್ನು ಅಲಿನೇಷನ್ ಮಾಡಲಾಗಿದೆ. ಆದರೆ ಆನಂತರ, ಕಲ್ಯಾಣ ಮಂಟಪವನ್ನು ನಿರ್ಮಿಸಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದ್ದು, ಇದಕ್ಕೆ ನಗರಸಭೆಗೆ ಯಾವುದೇ ರೀತಿಯ ತೆರಿಗೆಯನ್ನು ಪಾವತಿಸಿರುವುದಿಲ್ಲ. ಈ ಕುರಿತಂತೆ ನಗರಸಭೆ ಮಾಜಿ ಸದಸ್ಯ ಬಾಲಕೃಷ್ಣ ಅವರು ತೆರಿಗೆ ವಂಚನೆ ಕುರಿತಾಗಿ ಅರ್ಜಿ ಸಲ್ಲಿಸಿದ್ದರು. ಇದರನ್ವಯ ಸಭಾಭವನಕ್ಕೆ ಸಂಬಂಧಿಸಿದವರಿಗೆ ನೋಟೀಸ್ ಜಾರಿ ಮಾಡಿದ ನಂತರ ಸುಮಾರು 65 ಲಕ್ಷ ರೂ.ಗಳ ಬೃಹತ್ ಮೊತ್ತದ ತೆರಿಗೆ ಬಾಕಿ ಉಳಿಸಿಕೊಂಡಿರುವುದು ತಿಳಿದುಬಂದಿದೆ ಎಂದು ಮಾಹಿತಿ ನೀಡಿದ್ದಾರೆ.
ತೆರಿಗೆ ಪಾವತಿ ಮಾಡದ ಹಿನ್ನೆಲೆಯಲ್ಲಿ ನಗರಸಭೆಯಿಂದ ಸದರಿ ಆಸ್ತಿಯನ್ನು ಜಪ್ತಿ ಮಾಡಲು ಆದೇಶ ಹೊರಡಿಸಲಾಗಿತ್ತು. ಆದರೆ, ಇದರ ವಿರುದ್ಧ ಹೈಕೋರ್ಟ್‌ನಲ್ಲಿ ಪ್ರಕರಣ ದಾಖಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಜಪ್ತಿ ಆದೇಶಕ್ಕೆ ನಾಲ್ಕು ವಾರಗಳ ತಡೆ ನೀಡಿ, ಮುಂಬರುವ 20ನೆಯ ತಾರೀಖಿನ ಒಳಗಾಗಿ ಬಸವೇಶ್ವರ ಸಭಾ ಭವನದ ಮಾಲೀಕರು 18 ಲಕ್ಷ ರೂ.ಗಳನ್ನು ನಗರಸಭೆಗೆ ಪಾವತಿಸಬೇಕು. ಇಲ್ಲದೇ ಹೋದಲ್ಲಿ ತಡೆಯಾಜ್ಞೆಯನ್ನು ತೆರವು ಮಾಡಲಾಗುತ್ತದೆ ಎಂದು ನಿರ್ದೇಶಿಸಿದೆ ಎಂದಿದ್ದಾರೆ.
ಬೃಹತ್ ಮೊತ್ತದ ತೆರಿಗೆ ವಂಚನೆ ಪ್ರಕರಣ ಬಯಲಿಗೆಳೆದ ಬಾಲಕೃಷ್ಣ ಹಾಗೂ ಪ್ರಕರಣದಲ್ಲಿ ದಿಟ್ಟ ಕ್ರಮಕೈಗೊಂಡ ನಗರಸಭೆ ಆಯುಕ್ತ ಮನೋಹರ್ ಅವರನ್ನು ಸಾರ್ವಜನಿಕರು ಅಭಿನಂದಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post