ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕೊರೋನಾದಂತಹ ಸಂಕಷ್ಟ ಪರಿಸ್ಥಿತಿಯಲ್ಲಿ ರಾಜ್ಯದ ಅಮಾಯಕರ ಜೀವದ ಜೊತೆ ಚಲ್ಲಾಟವಾಡುತ್ತಿರುವ ಬಿಜೆಪಿ ಸರ್ಕಾರಕ್ಕೆ ಜನರ ಶಾಪ ತಟ್ಟದೇ ಬಿಡುವುದಿಲ್ಲ ಎಂದು ಶಾಸಕ ಬಿ.ಕೆ. ಸಂಗಮೇಶ್ವರ ವಾಗ್ದಾಳಿ ನಡೆಸಿದರು.
ಈ ಕುರಿತಂತೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಕುಂಭಕರ್ಣ ನಿದ್ರೆಯಲ್ಲಿದೆ. ಕೊರೋನಾ ಹೆಚ್ಚಳವಾಗುವ ಸಾಧ್ಯತೆಯಿದೆ, ಮುಂಜಾಗ್ರತಾ ಕ್ರಮ ವಹಿಸಿ, ಆಕ್ಸಿಜನ್ ಕೊರತೆಯಾಗದಂತೆ ಬೆಡ್ ಕೊರತೆಯಾಗದಂತೆ ವೈದ್ಯರು, ಸಿಬ್ಬಂದಿಗಳ ಕೊರತೆಯಾಗದಂತೆ ನೋಡಿಕೊಳ್ಳಿ ಎಂದು ತಜ್ಞರು ಕಳೆದ ನವೆಂಬರ್-ಡಿಸೆಂಬರ್ ವೇಳೆಯಲ್ಲಿಯೇ ವರದಿ ನೀಡಿದ್ದರು. ಆದರೆ, ರಾಜ್ಯ ಸರ್ಕಾರ ನಿದ್ದೆ ಮಾಡಿತ್ತು. ಈಗ ಸಾವಿರ ಸಂಖ್ಯೆಯಲ್ಲಿ ಜನರು ಸಾಯುತ್ತಿದ್ದಾರೆ. ಎಚ್ಚರಗೊಂಡು ಮೊನ್ನೆ ಕಮಿಟಿ ರಚನೆ ಮಾಡಿದ್ದಾರೆ. ಈ ಕಮಿಟಿ ಮೂಲಕ ಕಂಟ್ರೋಲ್ ಮಾಡುತ್ತೇನೆಂದು ಹೊರಟಿದ್ದಾರೆ. ಇದೇ ಕೆಲಸ ಮೊದಲು ಮಾಡಿದ್ದರೆ ಸಾವು-ನೋವು ಆಗುತ್ತಿರಲಿಲ್ಲ. ಇಷ್ಟು ಸಾವಿಗೆ ನೇರ ಬಿಜೆಪಿ ಸರ್ಕಾರವೇ ನೇರ ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ ಎಂದು ಕಿಡಿ ಕಾರಿದರು.
ಒಂದನೆಯ ತಾರೀಕು ಭದ್ರಾವತಿಯಲ್ಲಿ ನಡೆದ ಸಭೆಯಲ್ಲಿ ಈಶ್ವರಪ್ಪನವರಿಗೆ ನಾನು ಸಲಹೆ ಕೊಟ್ಟಿದ್ದೆ. ವಿಐಎಸ್‌ಎಲ್ ಕಾರ್ಖಾನೆಯಲ್ಲಿ ಆಕ್ಸಿಜನ್ ಪ್ಲಾಂಟ್ ನಿಂತಿದೆ. ಸರಿಪಡಿಸಿದರೆ ಆಕ್ಸಿಜನ್ ದೊರಕುತ್ತದೆ ಎಂದು ತಿಳಿಸಿದ್ದೆ. ಇದರಿಂದ ಎಚ್ಚೆತ್ತುಕೊಂಡು ಭದ್ರಾವತಿಗೆ ಈಶ್ವರಪ್ಪ ಮತ್ತು ಜಗದೀಶ್ ಶೆಟ್ಟರ್ ಬಂದಿದ್ದಾರೆ. ಎಷ್ಟರಮಟ್ಟಿಗೆ ಕಾರ್ಯಗತ ಮಾಡುತ್ತಾರೆ ನೋಡಬೇಕಾಗಿದೆ. ದಿನನಿತ್ಯ ಸಾವು-ನೋವು ಆಗುತ್ತಿರುವುದನ್ನು ಟಿವಿ ಮಾಧ್ಯಮಗಳಲ್ಲಿ ನೋಡುತ್ತಿದ್ದೇವೆ. ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಭ್ರಷ್ಟ ಬಿಜೆಪಿ ಸರ್ಕಾರ ಕೇವಲ ಭಾರತಕ್ಕೆ ರಾಜಕಾರಣ ಮಾಡುತ್ತಿದ್ದಾರೆಯೇ ಹೊರತು ಜನಹಿತಕ್ಕೆ ಅಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಜನರು ಸರ್ಕಾರಕ್ಕೆ ಶಾಪ ಹಾಕುತ್ತಿದ್ದಾರೆ. ಇವರಿಗೆ ಶಾಪ ತಟ್ಟದೇ ಬಿಡುವುದಿಲ್ಲ. ಇನ್ನು ಐದು ತಿಂಗಳಲ್ಲಿ ಸರ್ಕಾರ ಬೀಳುತ್ತದೆ ಎಂದು ಭವಿಷ್ಯ ನುಡಿದರು.
ಬಿಜೆಪಿಗೆ ಆಡಳಿತ ನಡೆಸಲು ಬರುವುದಿಲ್ಲ. ಅನುಭವದ ಕೊರತೆ ಇದೆ. ಸುಧಾಕರ್ ಒಂದು ತರ ಹೇಳುತ್ತಾರೆ, ಬೇರೆಯವರು ಒಂದು ತರ ಹೇಳುತ್ತಾರೆ. ಇವರದೇ ಪಕ್ಷದ ಶಾಸಕ ರೇಣುಕಾಚಾರ್ಯ ಸುಧಾಕರ್ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಇಂಥವರಿಂದ ಆರೋಗ್ಯ ಇಲಾಖೆ ಅಭಿವೃದ್ಧಿ ಹೇಗೆ ಸಾಧ್ಯ? ಜನರು ಛೀ ಥೂ ಎಂದು ಉಗಿಯುತ್ತಿದ್ದಾರೆ. ಈ ದಿವಸ ಬೆಳಗ್ಗೆ ಮುಖ್ಯಮಂತ್ರಿ ಅವರ ಮನೆ ಮುಂದೆ ರೋಗಿಯೊಬ್ಬರು ಮಲಗಿದ್ದಾರೆ ಇದರ ಏನು ಅರ್ಥ ಎಂದು ಪ್ರಶ್ನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post