ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ನಿನ್ನೆ ರಾತ್ರಿಯಿಂದ 14 ದಿನಗಳ ಜನತಾ ಕರ್ಫ್ಯೂ ಜಾರಿಯಗಿರುವ ಹಿನ್ನೆಲೆಯಲ್ಲಿ ಇಂದು ಮುಂಜಾನೆ ಅಗತ್ಯ ವಸ್ತು ಖರೀದಿಗೆ ಜನರು ನಗರದಲ್ಲಿ ಮುಗಿಬಿದ್ದ ದೃಶ್ಯ ಕಂಡು ಬಂದಿತು.
ಬಸವೇಶ್ವರ ವೃತ್ತ ಹಾಗೂ ರೈಲ್ವೆ ನಿಲ್ದಾಣದ ಬಳಿಯ ಮಾರುಕಟ್ಟೆಯಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜವಾವಣೆಯಾಗಿದ್ದು, ಹೊಸಮನೆ ಮುಖ್ಯರಸ್ತೆ, ಬಿಎಚ್ ರಸ್ತೆ, ಜನ್ನಾಪುರ ಸೇರಿದಂತೆ ಪ್ರಮುಖ ಪ್ರದೇಶಗಳಲ್ಲಿನ ತರಕಾರಿ ಅಂಗಡಿಗಳಿಗೂ ಜನರು ದಾಂಗುಡಿ ಇಟ್ಟಿದ್ದರು.
ನಗರದ ಬಹುತೇಕ ದಿನಸಿ ಅಂಗಡಿಗಳ ಮುಂದೆ ಸಾಲುಗಟ್ಟಿ ನಿಂತಿದ್ದ ಜನರು ಪದಾರ್ಥಗಳ ಖರೀದಿಯ ಧಾವಂತದಲ್ಲಿದ್ದುದು ಕಂಡುಬಂದಿತು.
ಸಾಮಾಜಿಕ ಅಂತರ ಗಾಳಿಗೆ ತೂರಿದ ಜನ
14 ದಿನಗಳ ಜನತಾ ಕರ್ಫ್ಯೂ ಘೋಷಣೆಯಾಗಿದ್ದರೂ ಪ್ರತಿದಿನ ಮುಂಜಾನೆ 6 ಗಂಟೆಯಿಂದ 10 ಗಂಟೆಯವರೆಗೂ ಅಗತ್ಯ ವಸ್ತುಗಳ ಖರೀದಿಗೆ ಅವಕಾಶವಿದೆ. ಆದರೆ, ಇನ್ನೆಂದೂ ಪದಾರ್ಥಗಳು ದೊರೆಯುವುದಿಲ್ಲ ಎಂಬಂತೆ ಜನರು ಖರೀದಿಗೆ ಮುಗಿಬೀಳುವ ಧಾವಂತದಲ್ಲಿ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿದ್ದರು.
ದಿನಸಿ ಹಾಗೂ ತರಕಾರಿ ಅಂಗಡಿಗಳ ಮುಂದೆ ಗುಂಪುಗಟ್ಟಿ, ವೈರಸ್ ಹರಡುವ ಆತಂಕವೇ ಇಲ್ಲದೇ ಸಾಮಾಜಿಕ ಅಂತರ ಕಾಪಾಡದೇ ಇದ್ದುದು ಜನರ ನಿರ್ಲಕ್ಷ್ಯತನವನ್ನು ತೋರಿಸುತ್ತಿತ್ತು.
ದಿನೇ ದಿನೇ ವೈರಸ್’ಗೆ ತುತ್ತಾಗಿ ಬಳಲುವವರ ಹಾಗೂ ಸಾವಿಗೀಡಾಗುವವರ ಸಂಖ್ಯೆ ಹೆಚ್ಚುತ್ತಿದೆ. ತಜ್ಞರು ಹಾಗೂ ಸರ್ಕಾರ ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಎಂದು ಹೇಳುತ್ತಲೇ ಇದೆ. ಆದರೆ, ಜನರು ಇದ್ಯಾವುದನ್ನೂ ಲೆಕ್ಕಿಸದೇ ಅನಾಗರೀಕರಂತೆ ವರ್ತಿಸುತ್ತಿರುವುದು ನಿಜಕ್ಕೂ ಆತಂಕಕಾರಿಯಾಗಿದೆ.ಬೆಳ್ಳಂಬೆಳಗ್ಗೆ ನಗರಸಭೆಯಿಂದ ದಂಡಾಸ್ತ್ರದ ಪ್ರಯೋಗ
ಇನ್ನು, ಅಗತ್ಯ ವಸ್ತು ಖರೀದಿಯ ಭರಾಟೆಯಲ್ಲಿ ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಪಾಡಿಕೊಳ್ಳದ ಬಹಳಷ್ಟು ಮಂದಿಗೆ ನಗರಸಭೆ ಅಧಿಕಾರಿಗಳು ದಂಡ ವಿಧಿಸಿದ್ದಾರೆ.
ಅಗತ್ಯ ವಸ್ತು ಖರೀದಿ ವೇಳೆ ಮಾಸ್ಕ್ ಧರಿಸುವಂತೆ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಪಾಲಿಕೆ ಅಧಿಕಾರಿಗಳು ಮೈಕ್ ಮೂಲಕ ಸಾರ್ವಜನಿಕರಿಗೆ ಮನವಿ ಮಾಡುತ್ತಿದ್ದರು. ಆದರೆ, ಜನರು ಇದಕ್ಕೆ ಕಿಮ್ಮತ್ತು ನೀಡುತ್ತಿರಲಿಲ್ಲ. ನಗರದ ಪ್ರಮುಖ ಪ್ರದೇಶಗಳಲ್ಲಿ ಗುಂಪು ಗುಂಪಾಗಿ ಸೇರಿದ್ದ ಜನರು ಸಾಮಾಜಿಕ ಅಂತರವನ್ನು ಮರೆತಿದ್ದರು. ಇಂತಹ ಸಂದರ್ಭದಲ್ಲಿ ಜನರಿಗೆ ಬಿಸಿ ಮುಟ್ಟಿಸಿದ ಅಧಿಕಾರಿಗಳು ದಂಡ ವಿಧಿಸುವ ಮೂಲಕ ಕಠಿಣ ಎಚ್ಚರಿಕೆ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post