ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ತಾಲೂಕಿನಲ್ಲಿ ಕೊರೋನಾ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ ನೇತೃತ್ವದಲ್ಲಿ ನಗರಸಭೆ ಸಭಾಂಗಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ಶಾಸಕರು, ಲಾಕ್‌ಡೌನ್‌ನಿಂದಾಗಿ ಸಾರ್ವಜನಿಕರ ಜೀವನ ನಿರ್ವಹಣೆ ಕಷ್ಟವಾಗಿದೆ. ರಾಜ್ಯಸರ್ಕಾರ ಬಡವರ ಖಾತೆಗೆ 10,000 ಹಣ ಹಾಕಬೇಕು. ಹಾಗೂ ಎರಡು ತಿಂಗಳ ಪಡಿತರ ಉಚಿತವಾಗಿ ನೀಡಬೇಕು. ಕೋವಿಡ್-19 ನಿಯಂತ್ರಿಸಲು ನೀಡಲಾಗುತ್ತಿರುವ ಕೋವ್ಯಾಕ್ಸಿನ್ ಲಸಿಕೆಯನ್ನು ಶೀಘ್ರವಾಗಿ ಎಲ್ಲರಿಗೂ ಕೊಡುವಂತೆ ಒತ್ತಾಯಿಸಿದರು.
ಕೊರೋನಾ ತಂದಿರುವ ಈ ಸಂಕಷ್ಟದ ಸಂದರ್ಭದಲ್ಲಿ ರೋಗಿಗಳಿಗಾಗಿ ಶಾಸಕರ ನಿಧಿಯಿಂದ 2 ಉಚಿತ ಆಂಬ್ಯುಲೆನ್ಸ್ ಸೇವೆಗೆ ವ್ಯವಸ್ಥೆ ಮಾಡಲಾಗುವುದು. ಹಾಗೂ ಭದ್ರಾವತಿ ಜನರ ಅನುಕೂಲಕ್ಕಾಗಿ 100 ಬೆಡ್ ಮತ್ತು ಮಂಚ ನೀಡಲಾಗುವುದು ಎಂದು ಹೇಳಿದರು.
ಇದೇ ವೇಳೆ ಸಾರ್ವಜನಿಕರು ಚಿಕಿತ್ಸೆಗೆಂದು ಓಡಾಡಲು ಪರದಾಡುವ ಪರಿಸ್ಥಿತಿ ಬಾರದಂತೆ ಪರ್ಯಾಯವಾಯಗಿ ಸಾರ್ವಜನಿಕ ಆಸ್ಪತ್ರೆಯಿಂದ ವಿ.ಐ.ಎಸ್.ಎಲ್ ಆಸ್ಪತ್ರೆಗೆ ಕೋವಿಡ್ ರಹಿತ ರೋಗಿಗಳಿಗೆ 2 ಬಸ್ ವ್ಯವಸ್ಥೆ ಕಲ್ಪಿಸಿಕೊಡುವಂತೆ ಮಾನ್ಯ ತಾಲ್ಲೂಕು ದಂಡಾಧಿಕಾರಿಗಳಿಗೆ ಸೂಚನೆ ನೀಡಿದರು.
ಕ್ಷೇತ್ರದ ಜನತೆಗೆ ಕೋವಿಡ್ ಮಾರಕವಾಗಬಾರದು, ನನ್ನ ಕ್ಷೇತ್ರದ ಜನತೆಯ ಆರೋಗ್ಯಕ್ಕಾಗಿ ಶಾಸಕರ ನಿಧಿಯು ಸಾಲದೇ ಇದ್ದಲ್ಲಿ ಹೆಚ್ಚುವರಿಯಾಗಿ ಎಷ್ಟೇ ಖರ್ಚು ಬಂದರೂ ಅದಕ್ಕೆ ತಮ್ಮ ಸ್ವಂತ ಹಣವನ್ನು ಸಹ ನೀಡುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಭದ್ರಾವತಿಯ 22 ಗ್ರಾಮಪಂಚಾಯತಿ ಮತ್ತು ಭದ್ರಾವತಿ ನಗರಸಭೆಯ 35 ವಾರ್ಡ್ ಗಳ ವ್ಯಾಪ್ತಿಯಲ್ಲಿ ಸೋಂಕಿತರು ಹಾಗೂ ಗುಣಮುಖರಾದವರ ಅಂಕಿ ಅಂಶಗಳನ್ನು ಒದಗಿಸುವುದರ ಜೊತೆಯಲ್ಲಿ, ಆಯಾ ಗ್ರಾಮ ಹಾಗೂ ವಾರ್ಡ್ ವಾರುಗಳಲ್ಲಿನ ಕುಂದುಕೊರತೆಗಳನ್ನು ಕೂಲಂಕುಷವಾಗಿ ಆಲಿಸಿ ಗಮನಕ್ಕೆ ತರಬೇಕೆಂದು ತಾಕೀತು ಮಾಡಿದರು..
ಜಿಲ್ಲಾ ಸರ್ಜನ್ ರಘುನಂದನ್ ದೂರವಾಣಿ ಮೂಲಕ ಜಿಲ್ಲಾಧಿಕಾರಿ ಅವರನ್ನು ಸಂಪರ್ಕಿಸಿದಾಗ, ತಾಲೂಕು ಸರ್ಕಾರಿ ಆಸ್ಪತ್ರೆ 100 ಹಾಸಿಗೆಗಳ ಸಾಮರ್ಥ್ಯ ಹೊಂದಿದ್ದು, ಸಂಪೂರ್ಣವಾಗಿ ಕೊರೋನಾ ರೋಗಿಗಳ ಚಿಕಿತ್ಸೆಗಾಗಿ ಮೀಸಲಿಡಲಾಗುವುದು. 50 ಹಾಸಿಗೆಗಳನ್ನು ಆಕ್ಸಿಜನ್ ಸೌಲಭ್ಯಕ್ಕಾಗಿ, ಇನ್ನುಳಿದ 50 ಹಾಸಿಗೆಯನ್ನು ಸೂಕ್ಷ್ಮ ಪ್ರಮಾಣದಲ್ಲಿ ಸೋಂಕು ಹೊಂದಿರುವ ರೋಗಿಗಳಿಗೆ ಮೀಸಲಿಡಲು ವ್ಯವಸ್ಥೆ ಮಾಡಲಾಗುವುದು. ಇತರೆ ರೋಗಿಗಳಿಗೆ ವಿಐಎಸ್‌ಎಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲು ತಯಾರಿ ನಡೆಸಲಾಗುವುದು. ಬಸ್ ವ್ಯವಸ್ಥೆ ಕಲ್ಪಿಸುವ ಪ್ರಸ್ತಾಪವಿದ್ದು, ಅಗತ್ಯ ಬಿದ್ದರೆ ನೆರವು ನೀಡಲಾಗುವುದು ಎಂದರು.
ಡಿವೈಎಸ್‌ಪಿ ಕೃಷ್ಣಮೂರ್ತಿ ಮಾತನಾಡಿ, ರಾಜ್ಯದಲ್ಲಿ ಜಾರಿಯಲ್ಲಿರುವ ಜನತಾ ಕರ್ಫ್ಯೂಗೆ ಸಾರ್ವಜನಿಕರ ಸಹಕಾರ ಅಗತ್ಯ. ಅನಾವಶ್ಯಕವಾಗಿ ಸಂಚರಿಸಬಾರದು, ಪೊಲೀಸ್ ಅಧಿಕಾರಿಗಳೊಂದಿಗೆ ವಾಗ್ವಾದ ಮಾಡಬೇಡಿ ಎಂದು ಮನವಿ ಮಾಡಿದರು.
ಜನತಾ ಕರ್ಫ್ಯೂ ಉಲ್ಲಂಘಿಸಿದವರ ವಿರುದ್ಧ 5400 ಪ್ರಕರಣ ದಾಖಲಾಗಿದ್ದು, 23,23,300ರೂ. ದಂಡ ವಿಧಿಸಲಾಗಿದೆ. ಮಾಸ್ಕ್ ಧರಿಸದಿದ್ದವರಿಂದ 3ಲಕ್ಷ ದಂಡ ವಸೂಲು ಮಾಡಲಾಗಿದೆ. ಹಾಗೂ ಅಕಾಡೆಮಿಕ್ ಡಿಸೀಸ್ ಆಕ್ಟ್ ರೀತ್ಯ ನಗರದಲ್ಲಿ 12 ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಆಯುಕ್ತ ಮನೋಹರ್ ಮಾತನಾಡಿ, ಮಾಸ್ಕ್ ಧರಿಸದವರಿಂದ 54,000 ದಂಡ ವಸೂಲು ಮಾಡಲಾಗಿದೆ. ಸಾಮಾಜಿಕ ಅಂತರ ಕಾಪಾಡಲು ವಿಫಲರಾಗಿರುವವರಿಂದ 38,000 ಹಾಗೂ ಮದುವೆ ಕಲ್ಯಾಣ ಮಂಟಪಗಳಲ್ಲಿ ಮಾರ್ಗಸೂಚಿ ಅನುಸರಿಸದವರಿಂದ 17 ದಂಡ ವಸೂಲು ಮಾಡಲಾಗಿದೆ ಎಂದು ಹೇಳಿದರು.
ತಾಪಂ ಸಿಇಓ ರಮೇಶ್ ಮಾತನಾಡಿ, ಗ್ರಾಮಾಂತರ ಪ್ರಧೇಶಗಳಲ್ಲೂ ಸೋಂಕು ನಿಯಂತ್ರಿಸಲು ಕ್ರಮ ಕೈಗೊಂಡಿದ್ದು, ಪಿಡಿಓಗಳ ಮೂಲಕ ಹೊರಪ್ರದೇಶದಿಂದ ಬಂದವರು, ಸೋಂಕಿತರು ಮತ್ತು ಐಸೋಲೇಶನ್‌ನಲ್ಲಿ ಇರುವವರ ಬಗ್ಗೆ ನಿರಂತರವಾಗಿ ಮಾಹಿತಿ ಪಡೆಯಲಾಗುತ್ತಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post