ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಲ್ಲಿ ಹಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಪಡಿತರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದು, ಲೋಪ ದೋಷ ಸರಿಪಡಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಜನತಾದಳದ ಶಶಿಕುಮಾರ್ ಎಸ್. ಗೌಡ ತಾಲೂಕು ಕಚೇರಿ ಮುಂದೆ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ಆರಂಭಿಸಿದರು.

ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಹತ್ತು ನ್ಯಾಯಬೆಲೆ ಅಂಗಡಿಗಳವರು ವಂಶಪಾರಂಪರ್ಯವಾಗಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಕಾನೂನು ನಿಯಮ ಪಾಲಿಸದೆ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದಾರೆ. ನ್ಯಾಯಬೆಲೆ ಅಂಗಡಿ ನಡೆಸುವವರು ಕನಿಷ್ಠ ಹತ್ತನೆಯ ತರಗತಿ ಉತ್ತೀರ್ಣರಾಗಿರಬೇಕು, 60 ವರ್ಷ ವಯೋಮಿತಿ ದಾಟಿರಬಾರದು. ಅವರಿಗೆ ನೀಡುವ ಪರವಾನಿಗೆ ಮೂರು ವರ್ಷಕ್ಕೆ ಸೀಮಿತವಾಗಿರಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ಅದನ್ನೆಲ್ಲ ಉಲ್ಲಂಘಿಸಿ ಹಲವರು ವಹಿವಾಟು ನಡೆಸುತ್ತಿದ್ದಾರೆ. ಕೇಳಿದರೆ ನಮಗೆ ನ್ಯಾಯಾಲಯದ ಆದೇಶವಿದೆ ಎಂದು ಹೇಳುತ್ತಾರೆ ಎಂದು ಶಶಿಕುಮಾರ್ ದೂರಿದರು.

ಮತ್ತೆ ಕೆಲವರು ತಿಂಗಳು ಪೂರ್ತಿ ಅಂಗಡಿ ತೆರೆಯದೆ, ತಿಂಗಳಲ್ಲಿ ಕೆಲವು ದಿನ ಮಾತ್ರ ನ್ಯಾಯಬೆಲೆಯಲ್ಲಿ ಪಡಿತರ ವಿತರಣೆ ಮಾಡುತ್ತಾರೆ. ಇದರಿಂದ ಬಡ, ಕೂಲಿ ಕಾರ್ಮಿಕರಿಗೆ ಮದ್ಯಮವರ್ಗದ ಜನರಿಗೆ ಪಡಿತರ ಪಡೆಯಲು ತೊಂದರೆಯಾಗುತ್ತಿದೆ. ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾಗಿರುವುದಿಲ್ಲ. ಆದ್ದರಿಂದ ಈ ಎಲ್ಲಾ ಲೋಪದೋಷ ಸರಿಪಡಿಸಿ ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿಯೂ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಮಾಡಬೇಕು ಮತ್ತು ವಂಶಪಾರಂಪರ್ಯ ಎಂದು ಹೇಳಿಕೊಂಡು ನ್ಯಾಯಬೆಲೆ ಅಂಗಡಿ ನಡೆಸುತ್ತಿರುವವರ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















