ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮಾನವ ಹಕ್ಕುಗಳ ಹೋರಾಟ ಸಮಿತಿ ವತಿಯಿಂದ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನಾ ಧರಣಿ ಸತ್ಯಾಗ್ರಹ ಆರಂಭಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಬಿ.ಎನ್. ರಾಜು, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳ್ಳಲು ಅಗತ್ಯವಿರುವ 5.50 ಕೋಟಿ ರೂ. ಹಣವನ್ನು ಮುಖ್ಯಮಂತ್ರಿಗಳು ಶೀಘ್ರವಾಗಿ ಬಿಡುಗಡೆ ಮಾಡಿ ಕಾಮಗಾರಿ ಪೂರ್ಣಗೊಂಡು ಭವನವನ್ನು ಮುಖ್ಯಮಂತ್ರಿ ಯಡಿಯೂರಪ್ಪನವರೇ ಉದ್ಘಾಟಿಸಬೇಕು. ಹೊಳೆಹೊನ್ನೂರಿನ ಕಲ್ಲಾಪುರ ಗ್ರಾಮ, ರಂಗಾಪುರ ಗ್ರಾಮಗಳಲ್ಲಿ ಸರ್ವೆ ನಂಬರ್ 1ರಲ್ಲಿನ 74 ಎಕರೆ 14 ಗುಂಟೆ ಕಂದಾಯ ಜಮೀನನ್ನು ಸಾಗುವಳಿ ಮಾಡಿದ ಕಾರಣಕ್ಕೆ ಜೈಲಿಗೆ ಹೋದ 24 ಕುಟುಂಬಗಳಿಗೆ ಆ ಜಮೀನನ್ನು ರಾಜ್ಯ ಸರ್ಕಾರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ನವುಲೆ ಬಸ್ಸಾಪುರದಲ್ಲಿನ ಬಡ ಜನರಿಗೆ ಇಪ್ಪತ್ತು ವರ್ಷಗಳಾದರೂ ಮನೆ ನೀಡದಿರುವುದರಿಂದ ಹಾಗೂ ಈ ಗ್ರಾಮದಲ್ಲಿ ಜನರು ಮೃತಪಟ್ಟರೆ ಶವ ಸಂಸ್ಕಾರ ಮಾಡಲು ಸ್ಮಶಾನವಿಲ್ಲ. ಹೀಗಾಗಿ, ತಾಲೂಕು ಆಡಳಿತ ಕೂಡಲೆ ಅಲ್ಲಿನ ಜನರಿಗೆ ಮನೆ ನೀಡಿ ಊರಿಗೆ ಒಂದು ಸ್ಮಶಾನ ಭೂಮಿ ನಿಗದಿಪಡಿಸಬೇಕು. ಈವರೆಗೆ ಸರ್ಕಾರದ ಗ್ರಾಮ ಠಾಣಾ ಜಾಗವನ್ನು ಅಳತೆ ಮಾಡಿ ಗುರುತಿಸದ ಅಧಿಕಾರಿಗಳನ್ನು ತತಕ್ಷಣ ಸೇವೆಯಿಂದ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.
ಲಕ್ಷ್ಮೀಪುರದಲ್ಲಿ ಪರಿಶಿಷ್ಠ ಜಾತಿಗೆ ಸೇರಿದ ಕುಟುಂಬವೊಂದರ ಜಮೀನು ಕಬಳಿಸಲು ಯತ್ನಿಸುತ್ತಿರುವವರ ವಿರುದ್ಧ ಕ್ರಮಕೈಗೊಂಡು ಆ ಪರಿಶಿಷ್ಠ ಜನಾಂಗದ ವ್ಯಕ್ತಿಯ ಜಮೀನಿಗೆ ಸಾಗುವಳಿಗೆ ರಕ್ಷಣೆ ಒದಗಿಸದ ಇಲ್ಲಿನ ಪೋಲಿಸ್ ಅಧಿಕಾರಿಗಳ ಹಾಗೂ ಕಂದಾಯ ಅಧಿಕಾರಿಯ ವಿರುದ್ಧ ಆಯಾ ಇಲಾಖೆಯ ವರಿಷ್ಠಾಧಿಕಾರಿಗಳು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತೇವೆ. ಈ ನಮ್ಮ ಎಲ್ಲಾ ಬೇಡಿಕೆ ಈಡೇರಿಸಬೇಕೆಂದು ಈ ಮೂಲಕ ನಾವು ಸರ್ಕಾರಕ್ಕೆ ಮನವಿ ಮಾಡುತ್ತಾ ಈ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಪ್ರತಿಭಟನೆಯಲ್ಲಿ ಸಮಿತಿಯ ಉಪಾಧ್ಯಕ್ಷ ಚಂದ್ರಶೇಖರ್, ಬ್ರಹ್ಮಲಿಂಗಯ್ಯ, ಸುಬ್ಬೇಗೌಡ ಹಾಗೂ ರೈತ ಸಂಘದ ಮುಖಂಡರಾದ ಯಶವಂತರಾವ್ ಘೋರ್ಪಡೆ, ವೀರೇಶ್ ಹಾಗೂ ಇತರ ರೈತ ಮುಖಂಡರು, ಕರವೇ ಅಧ್ಯಕ್ಷ ಗಿರೀಶ್, ಲತಾ, ಗಂಗಾಧರ, ಲಕ್ಷ್ಮೀಕಾಂತ, ಹನುಮಮ್ಮ ಮುಂತಾದವರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post