ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ರಾಜಕೀಯ ಹಾಗೂ ರಾಜಕೀಯೇತರ ನಾಯಕರ ವೈರುಧ್ಯಗಳು ಏನೇ ಇದ್ದರೂ ಮಾನವೀಯತೆಯ ವಿಚಾರ ಬಂದಾಗ ಭಿನ್ನತೆ ಮರೆತು ಒಂದಾಗುವುದು ಉತ್ತಮ ಸಮಾಜದ ಲಕ್ಷಣ. ಇದಕ್ಕೆ ಪೂರಕವಾಗಿರುವ ಒಂದು ಘಟನೆ ಇಂದು ನಗರದಲ್ಲಿ ನಡೆದಿದೆ.
ಹೌದು…ಇಂದು ಮುಂಜಾನೆ ಹೃದಯಾಘಾತದಿಂದ ಮೃತಪಟ್ಟ ವಿಐಎಸ್’ಎಲ್ ಗುತ್ತಿಗೆ ನೌಕರ ಅಂಥೋಣಿ ರಾಜ್ ಅವರ ಕುಟುಂಬಸ್ಥರ ನೆರವಿಗಾಗಿ ಇಡಿಯ ಭದ್ರಾವತಿಯ ರಾಜಕೀಯ ಹಾಗೂ ರಾಜಕೀಯೇತರ ನಾಯಕರು ಒಂದಾಗಿ ಯಶಸ್ವಿ ಮಾತುಕತೆ ನಡೆಸಿರುವ ಸ್ವಾಗತಾರ್ಹ ಬೆಳವಣಿಗೆ ನಡೆದಿದೆ.
ಕಾರ್ಖಾನೆಯಲ್ಲಿ ಕರ್ತವ್ಯದಲ್ಲಿದ್ದ ವೇಳೆಯಲ್ಲಿಯೇ ಅಂಥೋಣಿ ರಾಜ್ ಅವರು ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದರು. ಇವರು ಗುತ್ತಿಗೆ ನೌಕರರಾದ ಹಿನ್ನೆಲೆಯಲ್ಲಿ ಕಂಪೆನಿಯ ನಿಯಮಾವಳಿಗಳ ಪ್ರಕಾರ ಪರಿಹಾರ ದೊರೆಯುವುದಿಲ್ಲ. ಆದರೆ, ಅಂಥೋಣಿಯವರ ನಿಧನದಿಂದ ಅವರ ಕುಟುಂಬಸ್ಥರಿಗೆ ತೀವ್ರ ಆಘಾತವಾಗಿದ್ದು, ಮುಂದಿನ ಜೀವನ ನಿರ್ವಹಣೆಯ ಸವಾಲು ಎದುರಾಗಿತ್ತು.
ಇಂತಹ ವೇಳೆಯಲ್ಲಿ ಒಂದಾಗಿದ್ದರು ಉಕ್ಕಿನ ನಗರಿಯ ಎಲ್ಲ ನಾಯಕರು.
ಅಂಥೋಣಿಯವರು ಮೃತರಾದ ಹಿನ್ನೆಲೆಯಲ್ಲಿ ಪರಿಹಾರ ಹಾಗೂ ಉದ್ಯೋಗಕ್ಕೆ ಆಗ್ರಹಿಸಿ ಪ್ರತಿಭಟನೆ ಆರಂಭವಾದ ವಿಚಾರ ತಿಳಿಯುತ್ತಿದ್ದಂತೆಯೇ ಶಾಸಕ ಬಿ.ಕೆ. ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ಪತ್ರ ಅಜಿತ್ ಗೌಡ, ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಸ್ನೇಹ ಜೀವಿ ಬಳಗದ ಉಮೇಶ್, ಪ್ರಮುಖರಾದ ಬಾಲಣ್ಣ, ವಿಐಎಸ್’ಎಲ್ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಸೇರಿದಂತೆ ಹಲವು ನಾಯಕರು ಸ್ಥಳಕ್ಕೆ ದೌಡಾಯಿಸಿ, ಮೃತರ ಕುಟುಂಬಸ್ಥರ ಪರವಾಗಿ ಕಾರ್ಖಾನೆ ಹಾಗೂ ಗುತ್ತಿಗೆದಾರರ ಜೊತೆಯಲ್ಲಿ ಮಾತುಕತೆ ನಡೆಸಿದರು.
ಸಂಸಾರಕ್ಕೆ ಆಧಾರವಾಗಿದ್ದ ಆಂಥೋಣಿಯವರ ನಿಧನದಿಂದಾಗಿ ಅವರ ಕುಟುಂಬಸ್ಥರಿಗೆ ದಿಕ್ಕು ತೋಚದಂತಾಗಿದೆ. ಇಂತಹ ಸಂದರ್ಭದಲ್ಲಿ ಮಾನವೀಯತೆಯ ದೃಷ್ಠಿಯಿಂದ ಎಲ್ಲರೂ ಒಂದಾಗಿ ಹೋರಾಟ ನಡೆಸಬೇಕು ಎಂಬ ಸದುದ್ದೇಶದಿಂದ ಎಲ್ಲ ನಾಯಕರೂ ಒಂದಾಗಿದ್ದು ಸ್ವಾಗತಾರ್ಹ ಬೆಳವಣಿಗೆ.
ಗಂಟೆಗಳ ಕಾಲ ನಡೆದ ಸಭೆಯಲ್ಲಿ ಎಲ್ಲ ನಾಯಕರೂ ಪಾಲ್ಗೊಂಡು ಮೃತರ ಕುಟುಂಬಕ್ಕೆ ನೆರವಾಗುವ ಒಂದೇ ಸದುದ್ದೇಶದಿಂದ ಮಾತುಕತೆ ನಡೆಸಿದ್ದರ ಫಲ ಅಂತಿಮವಾಗಿ ಅಂಥೋಣಿಯವರ ಪತ್ನಿ ಹಾಗೂ ಪುತ್ರಿಗೆ ಉದ್ಯೋಗ ಹಾಗೂ 10 ಲಕ್ಷ ರೂ. ಪರಿಹಾರ ನೀಡುವುದಾಗಿ ತೀರ್ಮಾನವಾಗಿದೆ.
ಗುತ್ತಿಗೆದಾರರು ಹಣ ನೀಡುವುದು ವಿಳಂಬವಾಗುವ ಹಿನ್ನೆಲೆಯಲ್ಲಿ ಶಾಸಕರೇ ಸದ್ಯ ಮೃತರ ಕುಟುಂಬಕ್ಕೆ 10 ಲಕ್ಷ ರೂ. ಹಣ ನೀಡಿದ್ದು, ಮುಂದಿನ ದಿನಗಳಲ್ಲಿ ಗುತ್ತಿಗೆದಾರರಿಂದ ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ರಾಜಕೀಯ ವೈರುಧ್ಯ ಹಾಗೂ ಸೈದ್ದಾಂತಿಕ ಭಿನ್ನಾಭಿಪ್ರಾಯಗಳು ಏನೇ ಇದ್ದರೂ, ಊರಿನ ನೊಂದ ಕುಟುಂಬವೊಂದಕ್ಕೆ ನ್ಯಾಯ ಕೊಡಿಸುವ ವಿಚಾರದಲ್ಲಿ ಎಲ್ಲರೂ ಒಂದಾಗಿ ಪಟ್ಟ ಪ್ರಯತ್ನ ಯಶಸ್ವಿಯಾಗಿದೆ. ಇಂತಹ ಮಾದರಿ ಕಾರ್ಯ ಮಾಡಿದ ಶಾಸಕ ಬಿ.ಕೆ. ಸಂಗಮೇಶ್ವರ್, ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಗೌಡರ ಪತ್ರ ಅಜಿತ್ ಗೌಡ, ಎಎಪಿ ಜಿಲ್ಲಾಧ್ಯಕ್ಷ ಎಚ್. ರವಿಕುಮಾರ್, ಸ್ನೇಹ ಜೀವಿ ಬಳಗದ ಉಮೇಶ್, ಪ್ರಮುಖರಾದ ಬಾಲಣ್ಣ, ವಿಐಎಸ್’ಎಲ್ ನೌಕರರ ಸಂಘದ ಅಧ್ಯಕ್ಷ ಜಗದೀಶ್ ಸೇರಿದಂತೆ ಎಲ್ಲರನ್ನೂ ಕಲ್ಪ ಮೀಡಿಯಾ ಹೌಸ್ ಅಭಿನಂದಿಸುತ್ತದೆ.
ಅಕಾಲಿಕ ನಿಧನ ಹೊಂದಿದ ಅಂಥೋಣಿಯವರ ಕುಟುಂಬಸ್ಥರಿಗೆ ದುಃಖ ತಡೆದುಕೊಳ್ಳುವ ಶಕ್ತಿ ದೇವರು ದಯಪಾಲಿಸಲಿ ಎಂದೂ ಸಹ ಪ್ರಾರ್ಥಿಸುತ್ತೇವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post