ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ರಾಮ ಮಂದಿರ ನಿರ್ಮಾಣವಾಗುತ್ತಿರುವ ಒಂದು ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾವೆಲ್ಲರೂ ತುಂಬು ಹೃದಯದಿಂದ ಅಭಿನಂದಿಸಬೇಕು ಎಂದು ಬಿಳಕಿ ಹಿರೇಮಠದ ಶ್ರೀ ರಾಚೋಟೇಶ್ವರ ಸ್ವಾಮೀಜಿ ಹೇಳಿದರು.
ಅಯೋಧ್ಯ ರಾಮಮಂದಿರ ನಿರ್ಮಾಣದ ನಿಧಿ ಸಂಗ್ರಹಣಾ ಅಭಿಯಾನದ ಸಮಾರೋಪ ಮೆರವಣಿಗೆಯಲ್ಲಿ ಭಾಗವಹಿಸಿ ಮಾಧವಾಚಾರ್ ವೃತ್ತದಲ್ಲಿ ಸಾರ್ವಜನಿಕರನ್ನುದ್ಧೇಶಿಸಿ ಅವರು ಮಾತನಾಡಿದರು.
ಅಯೋಧ್ಯೆಯಲ್ಲಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣವಾಗುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಶ್ರೀ ರಾಮಮಂದಿರದ ನಿರ್ಮಾಣ ಕಾರ್ಯಕ್ಕೆ ಅಸಂಖ್ಯಾತ ಜನರು, ಸಾಧುಸಂತರು ಶ್ರಮಿಸಿದ್ದು ಅವರೆಲ್ಲರ ಹಾಗೂ ನಮ್ಮೆಲ್ಲರ ಬಹುವರ್ಷಗಳ ಕನಸು ನನಸಾಗುವ ಕಾಲ ಬಂದಿರುವುದು ನಮ್ಮೆಲ್ಲರಿಗೂ ಬಹಳ ಸಂತೋಷವಾಗಿದೆ. ಈ ಒಂದು ಕಾರ್ಯಕ್ಕೆ ನಾವೆಲ್ಲರು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಅಭಿನಂದಿಸಬೇಕು. ಆದಷ್ಟು ಶೀಘ್ರವಾಗಿ ಭವ್ಯವಾದ ಶ್ರೀರಾಮಮಂದಿರ ನಿರ್ಮಾಣವಾಗಲಿ ಎಂದು ನಾವೆಲ್ಲರೂ ಭಗವಂತನಲ್ಲಿ ಶ್ರದ್ಧೆಯಿಂದ ಪ್ರಾರ್ಥಿಸೋಣ ಎಂದರು.
ತಾಲೂಕು ಬಿಜೆಪಿ ಅಧ್ಯಕ್ಷ ಪ್ರಭಾಕರ್ ಮಾತನಾಡಿ, ಹಿಂದೆ ರಾಮ ಜನ್ಮಭೂಮಿಯ ಸ್ಥಳದಲ್ಲಿ ನಡೆದ ಕರಸೇವೆಯಲ್ಲಿ ಭದ್ರಾವತಿಯ ಅನೇಕರು ಭಾಗವಹಿಸಿದ್ದರು. ಈಗ ಆರಂಭವಾಗಲಿರುವ ರಾಮಂದಿರ ನಿರ್ಮಾಣ ಕಾರ್ಯ ಶೀಘ್ರವಾಗಿ ಪೂರ್ಣಗೊಂಡು, ನಾವೆಲ್ಲರು ರಾಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತಾಗಲಿ ಎಂದರು.
ಹೊಸಮನೆ ಶಿವಾಜಿ ವೃತ್ತದಿಂದ ಶ್ರೀರಾಮಚಂದ್ರ ದೇವರ ಮೂರ್ತಿಯನ್ನು ರಜತ ಕುದುರೆ ಸಾರೋಟು ವಾಹದಲ್ಲಿರಿಸಿ ನಿಧಿ ಸಂಗ್ರಹಣಾ ಅಭಿಯಾನದ ಮೆರವಣಿಗೆಯನ್ನು ಆರಂಭಿಸಲಾಯಿತು. ಹೊಸನಮನೆ ಮುಖ್ಯರಸ್ತೆ, ರಂಗಪ್ಪವೃತ್ತ, ಚನ್ನಗಿರಿ ರಸ್ತೆ, ಡಾ.ರಾಜ್‌ಕುಮಾರ್ ರಸ್ತೆ, ಮಾಧವಾಚಾರ್ ವೃತ್ತ, ಹಳೇ ಸೇತುವೆ, ಹಾಲಪ್ಪ ವೃತ್ತ, ಬಿ.ಎಚ್. ರಸ್ತೆ ಮೂಲಕ ಸಾಗಿದ ಮೆರವಣಿಗೆ ಅಂಡರ್ ಬ್ರಿಡ್ಜ್ ಬಳಿಯಿರುವ ಅಂಬೇಡ್ಕರ್ ವೃತ್ತದ ಬಳಿ ಮುಕ್ತಾಯವಾಯಿತು.
ಮೆರವಣಿಗೆಯಲ್ಲಿ ಬಿಜೆಪಿ ವಿಶ್ವ ಹಿಂದೂ ಪರಿಷತ್ ರಾಜ್ಯ ಸಂಚಾಲಕ ಹಾ.ರಾಮಪ್ಪ, ಮುಖಂಡರಾದ ಶ್ರೀನಾಥ್, ಧರ್ಮಪ್ರಸಾದ್, ಮಂಗೋಟೆ ರುದ್ರೇಶ್, ಆನಂದಕುಮಾರ್, ವಿಶ್ವನಾಥ್, ಸುಬ್ಬಣ್ಣ, ಕೃಷ್ಣಮೂರ್ತಿ, ವಿಜಯ್, ಡಾ.ದತ್ತ, ಬಜರಂಗದಳದ ಕೃಷ್ಣ, ಸವಾಯ್‌ಸಿಂಗ್, ಸುದರ್ಶನ್, ನರಸಿಂಹಾಚಾರ್ ಸೇರಿದಂತೆ ಅನೇಕ ಮಹಿಳೆಯರು ಪುರುಷರು ಭಾಗವಹಿಸಿದ್ದರು.
ಯುವಕರು ಶ್ರೀರಾಮನ ಹಾಡನ್ನು ಹಾಡುತ್ತಾ ನರ್ತಿಸಿದರು. ಮೆರವಣಿಗೆಯ ಮಾರ್ಗದಲ್ಲಿನ ಅಂಗಡಿ ಮುಂಗಟ್ಟುಗಳ ವ್ಯಾಪಾರಿಗಳು, ನಾಗರೀಕರು ಮಂದಿರ ನಿರ್ಮಾಣದ ನಿಧಿಗೆ ದೇಣಿಗೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post