ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಜನತಾ ಕರ್ಫ್ಯೂ ವಿಧಿಸಿರುವ ಹಿನ್ನೆಲೆ ಬೆಳಗ್ಗೆ 10 ಗಂಟೆಗೆ ನಗರಸಭೆ ಅಧಿಕಾರಿಗಳು ಮತ್ತು ಪೊಲೀಸರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದರು.
ನಗರದಲ್ಲಿ ಇಂದು ಬೆಳಿಗ್ಗೆ 9:30ರಿಂದಲೇ ವ್ಯಾಪಾರ ಬಂದ್ ಮಾಡುವಂತೆ ಅನೌನ್ಸ್ ಮಾಡಲಾಗುತ್ತಿತ್ತು. ಬೆಳಿಗ್ಗೆ 6ರಿಂದ 10ರವರೆಗೆ ಖರೀದಿಗೆ ಅವಕಾಶ ನೀಡಿದ್ದರಿಂದ ಅಂಗಡಿಗಳಲ್ಲಿ ಜನರು ಮುಗಿಬಿದ್ದಿರುವ ದೃಶ್ಯ ಸಾಮಾನ್ಯವಾಗಿತ್ತು. 10ಗಂಟೆ ನಂತರ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣ ಬಂದ್ ಮಾಡಿಸಲಾಯಿತು.
ನಗರದ ಪ್ರಮುಖ ರಸ್ತೆಗಳಿಗೆ ಬ್ಯಾರಿಕೇಡ್ ಅಳವಡಿಸಿ ಸಂಚಾರ ಸ್ಥಗಿತಗೊಳಿಸಲಾಗಿತ್ತು, ಸರ್ಕಾರಿ ಬಸ್ ನಿಲ್ದಾಣ ಬಳಿ, ಅಂಡರ್‌ಬ್ರಿಡ್ಜ್, ಮಾಧವಾಚರ್ ಸರ್ಕಲ್, ರಂಗಪ್ಪ ಸರ್ಕಲ್ ಪ್ರದೇಶಗಳಲ್ಲಿ ಬ್ಯಾರಿಕೇಡ್ ಅಳವಡಿಸಿ ವಾಹನ ಸಂಚಾರ ಬಂದ್ ಮಾಡಲಾಗಿತ್ತು. 10 ಗಂಟೆಯ ನಂತರ ಜನರ ಓಡಾಟಕ್ಕೆ ಅವಕಾಶವಿಲ್ಲ ಎಂದಿದ್ದರೂ ವಾಹನ ಸವಾರರು ಓಡಾಡುತ್ತಿದ್ದುದು ಕಂಡು ಬಂದಿತು.
ಪ್ರಮುಖ ರಸ್ತೆ ಸಂಪರ್ಕಿಸುವ ಪ್ರದೇಶಗಳಲ್ಲಿ ಪೊಲೀಸ್ ಅಧಿಕಾರಿಗಳು ವಾಹನ ಸವಾರರಿಗೆ ಎಚ್ಚರಿಕೆ ನೀಡುತ್ತಿದ್ದರು. ಅಗತ್ಯ ಸೇವೆ, ತುರ್ತು ಸೇವೆ ನಿಮಿತ್ತ ತೆರಳುವವರ ಹೊರತಾಗಿ ಅನಾವಶ್ಯಕವಾಗಿ ತಿರುಗಾಡುತ್ತಿದ್ದ ಜನರನ್ನು ತಡೆದು ತಪಾಸಣೆ ನಡೆಸಿದ ಪೊಲೀಸರು, ಸೂಕ್ತ ದಾಖಲೆ ನೀಡದೆ ಕಾರಣ ಕೊಟ್ಟವರಿಗೆ ದಂಡ ವಿಧಿಸಿದರು.
ಸರ್ಕಾರಿ ಕಚೇರಿಗಳು ಬ್ಯಾಂಕ್ ಹಾಗೂ ತುರ್ತು ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಗ್ರಾಹಕರ ಸಂಖ್ಯೆ ವಿರಳವಾಗಿತ್ತು. ಬಹಳಷ್ಟು ಹೊಟೇಲ್‌ಗಳಲ್ಲಿ ತೆರೆದಿದ್ದು, ಸರ್ಕಾರದ ಮಾರ್ಗಸೂಚಿಯಂತೆ ಪಾರ್ಸಲ್‌ಗೆ ಮಾತ್ರ ವ್ಯವಸ್ಥೆ ಇತ್ತು. ಉಳಿದಂಥೆ ನಗರಸಭೆ ಸಿಬ್ಬಂದಿಗಳು 12ಗಂಟೆಯವರೆಗೂ ಪರಿಶೀಲನೆ ನಡೆಸಿ, ಅರ್ಧಬಾಗಿಲು ತೆರೆದು ವ್ಯವಹಾರ ನಡೆಸುತ್ತಿದ್ದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಿ ವ್ಯವಹಾರ ನಡೆಸದಂತೆ ಎಚ್ಚರಿಕೆ ನೀಡಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post