ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಭದ್ರಾವತಿ ನಗರಸಭೆಯು ಹೆಚ್ಚುವರಿಯಾಗಿ ಆಸ್ತಿ ತೆರಿಗೆ ವಸೂಲು ಮಾಡುತ್ತಿದ್ದು ಕೂಡಲೇ ಈ ಆದೇಶವನ್ನು ಹಿಂತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿ ಮನೆ ಮಾಲೀಕರ ಸಂಘದ ವತಿಯಿಂದ ನಗರಸಭೆ ಆವರಣದಲ್ಲಿ ಧರಣಿ ನಡೆಸಿದರು.
ಭದ್ರಾವತಿ ನಗರಸಭೆಯು 2020-21ರಲ್ಲಿ ಶೇ.15ರಷ್ಟು, 2021-22ರಲ್ಲಿ ಸುಮಾರು ಶೇ.30ರಷ್ಟು, 2022-23ರಲ್ಲಿ ಶೇ.30ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಿದ್ದು, ಕಳೆದ ಎರಡು ವರ್ಷಗಳಲ್ಲಿ ಕೊರೋನಾ ಸಾಂಕ್ರಾಮಿಕದಿಂದಾಗಿ ನಾಗರೀಕರು ಯಾವುದೇ ಹೆಚ್ಚಿನ ಆದಾಯವಿಲ್ಲದೆ ಬಳಲುದ್ದಾರೆ. ಭದ್ರಾವತಿ ನಗರದಲ್ಲಿರುವ ಮೈಸೂರು ಕಾಗದ ಕಾರ್ಖಾನೆ ಮತ್ತು ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಈಗ ಬಹುತೇಕ ಮುಚ್ಚಲ್ಪಟ್ಟು ಕಾರ್ಮಿಕರು ಮತ್ತು ಅವರ ಕುಟುಂಬದವರು ಬೀದಿಗೆ ಬಿದ್ದಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಭದ್ರಾವತಿಯಲ್ಲಿ ನಿವೃತ್ತ ಕಾರ್ಮಿಕರೇ ಹೆಚ್ಚಾಗಿ ಮನೆ ಕಟ್ಟಿಕೊಂಡಿದ್ದಾರೆ. ಅವರುಗಳಿಗೆ ಯಾವುದೇ ರೀತಿಯ ಆದಾಯ ಇರುವುದಿಲ್ಲ. ಇಂತಹ ಸಂದರ್ಭದಲ್ಲಿ ನಗರಸಭೆಯು ರಾಜ್ಯ ಸರ್ಕಾರದ ಆದೇಶವಿದೆ ಎಂದು ಹೇಳಿ ಮನಸೋ ಇಚ್ಛೆ ಆಸ್ತಿ ತೆರಿಗೆಯನ್ನು ಅವೈಜ್ಞಾನಿಕ ರೀತಿಯಲ್ಲಿ ಹೆಚ್ಚಳ ಮಾಡಿದ್ದು, ಸಾರ್ವಜನಿಕರನ್ನು ಸಂಕಷ್ಟಕ್ಕೆ ಸಿಲುಕಿದ್ದಾರೆ. ಖಾಲಿ ನಿವೇಶನಗಳ ಆಸ್ತಿ ತೆರಿಗೆಯನ್ನು ಶೇ.500ರಿಂದ 600ಕ್ಕೂ ಜಾಸ್ತಿ ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
ಇತ್ತೀಚೆಗೆ ಖಾಲಿ ನಿವೇಶನಗಳಿಗೂ ಘನತ್ಯಾಜ್ಯ ಕರವೆಂದು ವಿಧಿಸಿ ನಾಗರೀಕರಿಗೆ ವಂಚನೆ ಮಾಡುತ್ತಿದ್ದಾರೆ. ಇದೆಲ್ಲವನ್ನೂ ನಗರಸಭೆಯವರು ಸುಳ್ಳು ಹಾಗೂ ತಪ್ಪು ಲೆಕ್ಕಾಚಾರಗಳನ್ನು ಮಾಡುತ್ತಾ ನಾಗರೀಕರಿಗೆ ಮೋಸ ಮಾಡುತ್ತಿರುವುದು ಮೇಲ್ನೋಟಕ್ಕೆ ಸಾಬೀತಾಗಿರುತ್ತದೆ ಎಂದು ಆರೋಪ ಮಾಡಿದರು.
ಈ ಸಂದರ್ಭದಲ್ಲಿ ಆಯುಕ್ತ ಪರಮೇಶ್, ನಗರಸಭಾ ಸದಸ್ಯ ಮೋಹನ್, ಕದಿರೇಶ್, ಕರಿಗೌಡ, ಉಪಾಧ್ಯಕ್ಷ ಚನ್ನಪ್ಪ, ಕಂದಾಯ ಅಧಿಕಾರಿ ರಾಜಕುಮಾರ್, ಅಮ್ ಆದ್ಮಿ ಪಕ್ಷದ ರವಿಕುಮಾರ್, ಮಾನವ ಹಕ್ಕುಗಳ ಸಮಿತಿಯ ರಾಜು, ಕಾಂಗ್ರೆಸ್ ತಾಲೂಕು ಅಧ್ಯಕ್ಷ ಚಂದ್ರೇಗೌಡ, ಪ್ರಮುಖರಾದ ನರಸಿಂಹಾಚಾರ್ ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post