ಭದ್ರಾವತಿ: ದೇಶದ ರಕ್ಷಣೆಗೆ ಸೈನಿಕ ಹಗಲಿರುಳು ಸೇವೆ ಸಲ್ಲಿಸಿದ ರೀತಿಯಲ್ಲಿ ನಗರದ ಸ್ವಚ್ಚತೆಗೆ ಪೌರಕಾರ್ಮಿಕರು ಶ್ರಮಿಸುತ್ತಿದ್ದಾರೆ ಎಂದು ಶಾಸಕ ಬಿ.ಕೆ. ಸಂಗಮೇಶ್ವರ್ ಹೇಳಿದರು.
ಅವರು ಸೋಮವಾರ ನಗರದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಗರಸಭೆ ಹಮ್ಮಿಕೊಂಡಿದ್ದ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಜನರ ಸೇವೆ ಮಾಡುತ್ತಾ ನಗರವನ್ನು ಸ್ವಚ್ಚತೆ, ನೈರ್ಮಲ್ಯ ಸ್ವಾಸ್ಥ್ಯ ಕಾಪಾಡುವಲ್ಲಿ ಪೌರಕಾರ್ಮಿಕರು ಕಠಿಣ ಶ್ರಮಕ್ಕೆ ಮುಂದಾಗಿದ್ದಾರೆ. ಇವರ ಸೇವೆ ನಿಜಕ್ಕೂ ಶ್ಲಾಘನೀಯ. ಕಾರ್ಮಿಕರು ಸ್ವಾಭಿಮಾನದಿಂದ ಬದುಕು ರೂಪಿಸಿಕೊಳ್ಳಲು ದುಶ್ಚಟಗಳಿಂದ ದೂರವಾಗಿ ಕುಟುಂಬದಲ್ಲಿ ಮಕ್ಕಳ ಭವಿಷ್ಯ ರೂಪಿಸಲು ಮುಂದಾಗಬೇಕಿದೆ. ನಿಸ್ವಾರ್ಥ ಸೇವೆ ಸಲ್ಲಿಸುವ ಪೌರ ಕಾರ್ಮಿಕರಿಗೆ ಗೌರವದಿಂದ ಕಾಣುವಂತಾಗಬೇಕು. ಇಂದಿನ ದಿನಗಳಲ್ಲಿ ಅವರ ಬದುಕು ಸಾಕಷ್ಟು ಬದಲಾವಣೆಯಾಗಿರುವುದು ಕಂಡು ಬರುತ್ತಿದೆ. ಪರಿಪೂರ್ಣ ಬದಲಾವಣೆಗೊಂಡು ಆರೋಗ್ಯದೆಡೆ ಹೆಚ್ಚು ಗಮನ ಹರಿಸುವ ಮೂಲಕ ಸುಂದರ ಬದುಕು ರೂಪಿಸಿಕೊಳ್ಳಬೇಕು. ಕಾರ್ಮಿಕರಿಗೆ ಸರಕಾರದಿಂದ ದೊರೆಯುವ ಎಲ್ಲಾ ಸೌಲಭ್ಯಗಳನ್ನು ಚಾಚು ತಪ್ಪದೆ ಒದಗಿಸಿಕೊಡಲು ಬದ್ದರಾಗಿದ್ದೇವೆ ಎಂದರು.

ಖ್ಯಾತ ವೈದ್ಯೆ ಡಾ.ವೀಣಾ ಭಟ್ ಉಪನ್ಯಾಸ ನೀಡಿ, ಪರಿಸರ ಸ್ವಚ್ಚತೆಯಿಂದ ಮಾತ್ರ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಇಂತಹ ಕಾರ್ಯಗಳನ್ನು ಪೌರ ಕಾರ್ಮಿಕರು ತಮ್ಮ ಆರೋಗ್ಯವನ್ನು ಲೆಕ್ಕಿಸದೆ ನಗರದ ಸ್ವಚ್ಚತೆಯನ್ನು ಚಾಚು ತಪ್ಪದೆ ಮಾಡುತ್ತಿರುವುದರಿಂದ ಇಂದು ಎಲ್ಲೆಡೆ ಉತ್ತಮ ಪರಿಸರ ಕಾಣಲು ಸಾಧ್ಯವಾಗಿದೆ. ಮನುಷ್ಯನ ಹಣದ ದುರಾಸೆಯಿಂದ ಪ್ಲಾಸ್ಟಿಕ್ ಎಂಬ ಬಸ್ಮಾಸುರ ವ್ಯಾಪಿಸಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವಂತಾಗಿದೆ.
ಪೌರ ಕಾರ್ಮಿಕರು ಆರೋಗ್ಯದೃಷ್ಟಿಯಿಂದ ಇಲಾಖೆ ನೀಡುವ ರಕ್ಷಾಕವಚಗಳನ್ನು ಧರಿಸಿ ಕಾರ್ಯಪ್ರವೃತ್ತರಾಗಬೇಕು. ಮದ್ಯ ಸೇವನೆ, ತಂಬಾಕು ಮುಂತಾದ ದುಶ್ಚಟಗಳಿಂದ ದೂರವಾಗಿ ಸಕಾಲದಲ್ಲಿ ಚುಚ್ಚುಮದ್ದು ಹಾಗು ಔಷಧಿಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಕಂದಾಯಾಧಿಕಾರಿ ಎಂ.ಎಸ್.ರಾಜಕುಮಾರ್ ಪ್ರಾಸ್ತಾವಿಕ ನುಡಿಗಳನ್ನಾಡಿ, ನಗರವನ್ನು ಸ್ವಚ್ಚತೆ ಮಾಡುವ ಮೂಲಕ ಎಲ್ಲರ ಆರೋಗ್ಯ ಕಾಪಾಡುವ ಪೌರ ಕಾರ್ಮಿಕರು ದೇಶದ ಮೊದಲ ವೈದ್ಯರಾಗಿದ್ದಾರೆ. ನಗರಸಭೆಯಿಂದ ಶೇ. 24.1 ರ ಅನುಪಾತದಲ್ಲಿ ಪೌರ ಕಾರ್ಮಿಕರಿಗೆ ಸುರಕ್ಷಾ ಕವಚಗಳನ್ನು ನೀಡಲಾಗುತ್ತಿದೆ. ಎಲ್ಲಾ ಹುದ್ದೆಗಳಿಗೆ ನೀಡುವಂತೆ ಪೌರ ಕಾರ್ಮಿಕರಿಗೆ ಹೆಚ್ಚಿನ ವೇತನಕ್ಕೆ ಮನ್ನಣೆ ನೀಡುವಂತಾಗಬೇಕು ಎಂದರು.
ರಾಜ್ಯ ಪೌರಸೇವಾ ನೌಕರರ ಸೇವಾ ಸಂಘದ ಶಾಖಾಧ್ಯಕ್ಷ ಆರ್. ಕೃಷ್ಣಮೂರ್ತಿ ಮಾತನಾಡಿ ಕಾರ್ಮಿಕರ ಅನೇಕ ವರ್ಷಗಳ ಹೋರಾಟದಿಂದ ಪೌರ ಕಾರ್ಮಿಕರಿಗೆ ರಾಜ್ಯ ಸರಕಾರ ಪೌರಕಾರ್ಮಿಕರಿಗೆ ರಜೆ ಘೋಷಿಸಿ ಪೌರ ಕಾರ್ಮಿಕರ ದಿನಾಚರಣೆ ಆಚರಿಸಲು ಮುಂದಾಗಿರುವುದು ಶ್ಲಾಘನೀಯ. ರಾಜ್ಯದಲ್ಲಿ ಇತರೆ ಸರಕಾರಿ ನೌಕರರಿಗೆ ನೀಡುವ ಮಾದರಿಯಲ್ಲಿ ಕೆಜಿಐಡಿ ಜಾರಿಗೆ ತಂದು ಏಕರೂಪ ಜಾರಿಗೆ ತರಬೇಕು. ರಾಜ್ಯದ ಎಲ್ಲಾ ಶಾಸಕರು ಒಗ್ಗೂಡಿ ಸಭೆಯಲ್ಲಿ ಪ್ರಸ್ತಾಪಿಸಿ ಜಾರಿಗೆ ತರಲು ಮುಂದಾಗಬೇಕೆಂದು ಒತ್ತಾಯಿಸಿದರು.
ಸಭೆಯ ಕಾರ್ಯಕ್ರಮಕ್ಕೂ ಮುನ್ನ ರಂಗಪ್ಪವೃತ್ತದಿಂದ ಮಾಧವಚಾರ್ ವೃತ್ತ, ಹಾಲಪ್ಪವೃತ್ತ, ಡಾ.ರಾಜಕುಮಾರ್ ರಸ್ತೆ, ಡಾ. ಅಂಬೇಡ್ಕರ್ ವೃತ್ತಕ್ಕೆ ಬೃಹತ್ ಮೆರವಣಿಗೆ ಮೂಲಕ ತೆರಳಿದರು. ಮೆರವಣಿಗೆಯಲ್ಲಿ ವಿವಿಧ ಕಲಾವಿದರ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನೂರಾರು ಪೌರ ಕಾರ್ಮಿಕರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ಇದೇ ಸಂದರ್ಭದಲ್ಲಿ ಆಟೋಟ ಸ್ಪರ್ಧೆಗಳಲ್ಲಿ ಸ್ಪರ್ಧಿಸಿ ವಿಜೇತರಾದ ಪೌರ ಕಾರ್ಮಿಕರಿಗೆ ಹಾಗು ಹಿರಿಯ ಪೌರ ಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)







Discussion about this post