ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಗರದಲ್ಲಿ ನಿರ್ಮಾಣವಾಗುತ್ತಿರುವ ಬೌದ್ಧ ವಿಹಾರ/ಮಂದಿರಕ್ಕೆ ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಶ್ರೀನಿವಾಸ್ ತಮ್ಮ ಸ್ವಂತ ಜಮೀನು ದಾನ ನೀಡುವ ಮೂಲಕ ಉದಾರತೆ ಮೆರೆದಿದ್ದಾರೆ.
ಮೂಲತಃ ಹೊಸನಂಜಾಪುರ ಗ್ರಾಮದವರಾದ ಶ್ರೀನಿವಾಸ್ ದಾವಣಗೆರೆಯಲ್ಲಿ ವಾಣಿಜ್ಯ ತೆರಿಗೆ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿದ್ದಾರೆ. ತಮ್ಮ ಸ್ವಂತ ಜಮೀನಿನಲ್ಲಿ ಬೌದ್ಧ ವಿಹಾರ ನಿರ್ಮಾಣಕ್ಕೆ ಸುಮಾರು 2 ಎಕರೆ ಜಾಗವನ್ನು ಸಂಬುದ್ಧ ಧಮ್ಮಾಂಕುರ ಟ್ರಸ್ಟ್ಕ್ಕೆ ದಾನವಾಗಿ ನೀಡಿದ್ದಾರೆ. ಬಾಕಿ ಉಳಿದಿರುವುದು ಸುಂದರ ಬೌದ್ಧ ವಿಹಾರ/ಮಂದಿರ ನಿರ್ಮಾಣದ ಕಾರ್ಯ ಮಾತ್ರ.
ಸಂವಿಧಾನ ಶಿಲ್ಪಿ, ಭಾರತರತ್ನ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡಿರುವ ಬಹಳಷ್ಟು ಜನ ಇತ್ತೀಚಿನ ವರ್ಷಗಳಲ್ಲಿ ಬೌದ್ಧ ಧರ್ಮದ ಕಡೆ ಹೆಚ್ಚಿನ ಒಲವು ತೋರಿಸುತ್ತಿರುವ ಹಿನ್ನೆಲೆಯಲ್ಲಿ ಭಗವಾನ್ ಬುದ್ಧ ಹಾಗೂ ಅಂಬೇಡ್ಕರ್ ಅವರ ಅನುಯಾಯಿಗಳಿಗೆ ಪೂರಕ ವಾತಾವರಣ ಕಲ್ಪಿಸಿಕೊಡುವಂತೆ ಇದೀಗ ಬೌದ್ಧ ವಿಹಾರ/ಮಂದಿರ ನಿರ್ಮಾಣಗೊಳ್ಳುತ್ತಿದೆ.
ಅ.14ರಂದು ಬೌದ್ಧ ವಿಹಾರ/ಮಂದಿರ ನಿರ್ಮಾಣಕ್ಕೆ ಗುದ್ದಲಿಪೂಜೆ ನಡೆಯುತ್ತಿದ್ದು, ಶೀಘ್ರವಾಗಿ ಮುಕ್ತಾಯಗೊಳ್ಳುವ ಮೂಲಕ ಲೋಕಾರ್ಪಣೆಗೊಳ್ಳುವಂತಾಗಲಿ ಎಂಬುದು ಬೌದ್ಧ ಅನುಯಾಯಿಗಳ ಆಶಯವಾಗಿದೆ.
ಇದೇ ಸಂದರ್ಭದಲ್ಲಿ ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಸುರೇಶ್ ಹಾಗು ಶಿಕ್ಷಕ ಎ. ತಿಪ್ಪೇಸ್ವಾಮಿ ಅವರು ಬೌದ್ಧ ಭಿಕ್ಕುಗಳ ಸಮ್ಮುಖದಲ್ಲಿ ಬೌದ್ಧ ಧರ್ಮ ದೀಕ್ಷೆ ಪಡೆಯಲಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post