ಭದ್ರಾವತಿ: ಸಾವಿರಾರು ವರ್ಷಗಳ ಇತಿಹಾಸವಿದ್ದು, ಸಾಹಿತ್ಯ ರೂಪಕ ಪಡೆದಿರುವ ಕನ್ನಡ ಭಾಷೆಯನ್ನು ನಾಡಿನಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿಗಳು ಮೈ ತುಂಬಿಕೊಳ್ಳಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಉಪಾಧ್ಯಕ್ಷ ಎಚ್.ಎನ್. ಮಹಾರುದ್ರ ಹೇಳಿದರು.
ನ್ಯೂಟೌನ್ ಸರಕಾರಿ ರಜತಮಹೋತ್ಸವ ಪದವಿಪೂರ್ವ ಕಾಲೇಜಿನಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಈರಮ್ಮ ದಿವಂಗತ ವೀರಭದ್ರಪ್ಪ ದತ್ತಿ (ಸರ್.ಎಂ.ವಿ ಸ್ಮರಣೆ) ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬೇರಾವ ರಾಜ್ಯದ ಭಾಷೆಗಳಲ್ಲಿ ಪಡೆಯದೆ ಅತಿಹೆಚ್ಚು 8 ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದಿರುವ ಹೆಮ್ಮೆಯ ಕನ್ನಡ ಭಾಷೆಯಾಗಿದೆ. ಸಹಸ್ರಾರು ವರ್ಷಗಳ ಹಿಂದೆ ಹಲ್ಮಡಿ ಶಾಸನ ಶಾಸನಕ್ಕು ಮುಂಚಿತವಾಗಿ ಸಾಹಿತ್ಯ ರೂಪಕ ಶಾಸನ ಪಡೆದು ಇತಿಹಾಸ ಕಂಡಿರುವ ಏಕೈಕ ಭಾಷೆಯಾಗಿದೆ. ಸರ್.ಎಂ. ವಿಶ್ವೇಶ್ವರಯ್ಯ ರವರಿಗೂ ಅವಿನಭಾವ ಸಂಬಂಧವಿರುವ ಕನ್ನಡ ಭಾಷೆಗೆ ಅವರು ಹೆಚ್ಚಿನ ಶ್ರಮ ವಹಿಸಿದ್ದರು. ಆದ್ದರಿಂದ ಸರ್’ಎಂವಿ ರವರಿಗೆ ಕೀರ್ತಿ ಸಲ್ಲುತ್ತದೆ. ರಾಷ್ಟ್ರಮಟ್ಟದಲ್ಲಿ 3 ರಾಷ್ಟ್ರ ಕವಿಗಳನ್ನು ತಂದುಕೊಟ್ಟಿರುವ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ತಹಸೀಲ್ದಾರ್ ಸೋಮಶೇಖರ್ ಮಾತನಾಡಿ ಅನೇಕ ಕನ್ನಡಪರ ಸಂಘಟನೆಗಳ ಶ್ರಮದಿಂದ ನಾಡಿನಲ್ಲಿ ಕನ್ನಡ ಭಾಷೆ ಉಳಿವಿಗೆ ಕಾರಣವಾಗಿದೆ. ಆಂಗ್ಲ ಮಾಧ್ಯಮ ವ್ಯಾಮೋಹದಿಂದ ಕನ್ನಡಕ್ಕೆ ಕುತ್ತು ಬಂದಿರುವುದು ವಿಷಾಧನೀಯ. ಮಧ್ಯಮ ವರ್ಗದ ಜನರು ಸಹ ಆಂಗ್ಲ ಮಾಧ್ಯಮದ ಮೋಹಕ್ಕೆ ಒಳಗಾಗಿ ಕನ್ನಡ ಶಾಲೆಗಳು ದುಸ್ಥಿತಿ ತಲುಪುವಂತಾಗಿದೆ. ಕನ್ನಡ ಶಾಲೆಗಳಲ್ಲಿ ವ್ಯಾಸಾಂಗ ಮಾಡಿರುವ ಅದೇಷ್ಟೋ ಜನರು ಇಂದು ಉನ್ನತ ಸ್ಥಾನಗಳನ್ನು ಪಡೆದಿದ್ದಾರೆ. ಅದ್ದರಿಂದ ಕನ್ನಡ ಶಾಲೆಗಳಲ್ಲಿ ಓದಬೇಕೆಂಬ ಹಂಬಲ ಮೂಡಿಬರುವಂತಾಬೇಕು. ಜನರ ಸಹಕಾರವಿದ್ದಲ್ಲಿ ಮಾತ್ರ ಬೆಳವಣಿಗೆ ಸಾಧ್ಯ. ಇದರಿಂದ ಕನ್ನಡ ಭಾಷೆ, ಸಂಸ್ಕೃತಿ ಹಾಗು ಜ್ಞಾನ ಬೆಳೆಯಲು ಸಹಕಾರಿಯಾಗಲಿದೆ ಎಂದರು.
ಅರಹತೊಳಲು ಸರಕಾರಿ ಪ್ರೌಢಶಾಲೆಯ ಶಿಕ್ಷಕ ಅರಳಿಹಳ್ಳಿ ಅಣ್ಣಪ್ಪ ಆಧುನಿಕ ಸಮಾಜಕ್ಕೆ ಸರ್’ಎಂವಿ ಅವರ ಕೊಡುಗೆ ಕುರಿತು ಉಪನ್ಯಾಸ ನೀಡಿ ಸಮಾಜದಲ್ಲಿ ಸಾಧಕರು, ಸಾಮಾನ್ಯರು ಹಾಗು ಸೋಮಾರಿಗಳೆಂಬ 3 ರೀತಿಯ ವರ್ಗದ ಜನರನ್ನು ಕಾಣಬಹುದಾಗಿದೆ. ಸಾಧಕರು ಸಾಧನೆಯ ಕುರಿತು ಯೋಚಿಸಿದರೆ, ಸಾಮಾನ್ಯರು ನಮ್ಮದೇನು ಎಂಬಂತೆ ಚಿಂತಿಸುತ್ತಾರೆ. ಆದರೆ ಸೋಮಾರಿಗಳು ಸಮಾಜದ ಕುರಿತು ಕಿಂಚತ್ತು ಯೋಚನೆ ಮಾಡದೆ ಕಾಲಾಹರಣ ಮಾಡುವ ವರ್ಗಕ್ಕೆ ಸೇರಿದವರಾಗಿರುತ್ತಾರೆ.
ಛಲಗಾರಿಕೆ, ನಿಷ್ಠೆಯಿಂದ ಇರುವವರು ಮುನ್ನಡೆದು ಸಾಗುತ್ತಾರೆ. ಅದರಂತೆ ಸರ್‌ಎಂವಿ ರವರು ಛಲಗಾರಿಕೆ ಹೊತ್ತು ಸಾಧಕರ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದರು. ಇದರಿಂದ ಅವರ ಬದುಕಿನ ಸಾಧನೆಗೆ ಅಡ್ಡಿಯಾಗಿರಲಿಲ್ಲ. ಮೈಸೂರಿನ ಅರಸರ ಆಳ್ವಿಕೆಯಲ್ಲಿ ದಿವಾನರಾಗಿ ಕರ್ತವ್ಯ ಮಾಡಿದ ಕೀರ್ತಿಯು ಅವರಿಗೆ ಸಂದ ಗೌರವವಾಗಿದೆ ಎಂದು ಸರ್‌ಎಂವಿ ರವರ ಜೀವನ ಚರಿತ್ರೆಯನ್ನು ವಿಶ್ಲೇಶಿಸಿದರು.
ಪರಿಷತ್ತಿನ ತಾಲೂಕು ಅಧ್ಯಕ್ಷ ಅಪೇಕ್ಷ ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ದತ್ತಿದಾನಿ ಕರಿಗೌಡ್ರ ನಾಗರಾಜಪ್ಪ ಆರುಂಡಿ, ಕಾಲೇಜಿನ ಉಪನ್ಯಾಸಕರಾದ ಎನ್. ಇಕ್ಬಾಲ್’ದ್ದೀನ್ ಅಹಮದ್, ರವಿಕುಮಾರ್ ಮುಂತಾದವರು ವೇದಿಕೆಯಲ್ಲಿದ್ದರು. ಜ್ಯೋತಿ ರಾಜಶೇಖರ್ ತಂಡದವರಿಂದ ನಾಡಗೀತೆ ಹಾಗು ಸಮೂಹ ಗಾಯನ ನೆರವೇರಿತು. ವೈ.ಕೆ. ಹನುಮಂತಯ್ಯ ಸ್ವಾಗತಿಸಿ, ಸಿ. ಚನ್ನಪ್ಪ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post