ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಯುವ ಕೃಷಿಕರು ಸಾವಯವ ಕೃಷಿಯನ್ನು ಅಳವಡಿಸಿಕೊಳ್ಳುವುದರಿಂದ ರೈತರ ಆತ್ಮಹತ್ಯೆ ತಡೆಯುವ ಜೊತೆಯಲ್ಲೇ ನಿರುದ್ಯೋಗದ ಸಮಸ್ಯೆಯೂ ಸಹ ಕಡಿಮೆಯಾಗುತ್ತದೆ ಎಂದು ಸ್ವದೇಶಿ ಜಾಗರಣ ಮಂಚ್ ಕ್ಷೇತ್ರೀಯ ಸಂಘಟಕ ಜಗದೀಶ್ ಅಭಿಪ್ರಾಯಪಟ್ಟರು.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಎನ್‌ಎಮ್‌ಸಿ 2ನೆಯ ಅಡ್ಡರಸ್ತೆಯ ಶ್ರೀಪಾದ್ ಅವರ ನಿವಾಸದಲ್ಲಿ ಆಯೋಜಿಸಲಾಗಿದ್ದ ನಿರುದ್ಯೋಗದ ಪರಿಹಾರೋಪಾಯಗಳು, ಉದ್ಯೋಗಾಧಾರಿತ ವಿಕಾಸದ ಬಗ್ಗೆ ಹಾಗೂ ಹೊಸ ಬಗೆಯ ಆವಿಷ್ಕಾರಗಳ ಕುರಿತಾಗಿನ ಸಂವಾದದಲ್ಲಿ ಅವರು ಮಾತನಾಡಿದರು.
ರಾಸಾಯನಿಕ ಕೃಷಿಯನ್ನು ಅವಲಂಭಿಸಿದ ರೈತ ಸಮುದಾಯದಲ್ಲೇ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಆದರೆ, ಸಾವಯವ ಆಧಾರಿತ ಕೃಷಿ ಪದ್ಧತಿಯನ್ನು ಅನುಸರಿಸುವ ಕೃಷಿಕ ಸಮುದಾಯದಲ್ಲಿ ಆತ್ಮಹತ್ಯೆಗಳು ಬಹುತೇಕ ಇಲ್ಲವೇ ಇಲ್ಲ. ಹೀಗಾಗಿ ರೈತರು ಅದರಲ್ಲೂ ಯುವ ರೈತರು ರಾಸಾಯನಿಕ ಕೃಷಿಗಿಂತ ಸಾವಯವದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಎಂದರು.
ಕೇಂದ್ರ ಸರ್ಕಾರ ರಾಸಾಯನಿಕ ಗೊಬ್ಬರಕ್ಕಾಗಿಯೇ ಲಕ್ಷ ಕೋಟಿ ಲೆಕ್ಕದಲ್ಲಿ ಹಣ ವ್ಯಯಿಸುತ್ತಿದೆ. ಇದೇ ಹಣದಿಂದ ರೈತರ ಆರ್ಥಿಕ ದುಸ್ಥಿತಿಯನ್ನು ಸರಿಪಡಿಸಬಹುದು. ಇದಕ್ಕೆ ಪರ್ಯಾಯವಾಗಿ ಸಾವಯವ ಕೃಷಿಯನ್ನು ಅಳವಡಿಕೊಳ್ಳಬೇಕು ಎಂದರು.
ರಾಸಾಯನಿಕ ಕೃಷಿ ಎಷ್ಟು ಅಪಾಯಕಾರಿಯೋ, ಈರೀತಿ ಬೆಳೆದ ರಾಸಾಯನಿಕ ಆಹಾರ ಸೇವನೆಯೂ ಸಹ ಆರೋಗ್ಯಕ್ಕೆ ಹಾನಿಕಾರಕವಾದುದು. ರಾಸಾಯನಿಕ ಆಹಾರ ಸೇವಿಸುವ ಬಹಳಷ್ಟು ದಂಪತಿಗಳಲ್ಲಿ ಸಂತಾನ ಹೀನತೆ ಕಾಡುತ್ತಿದೆ. ಅಲ್ಲದೆ, ಹುಟ್ಟಿದ ಬಹಳಷ್ಟು ಮಕ್ಕಳಲ್ಲಿ ಅವರು ಬೆಳೆದು ದೊಡ್ಡವರಾದರೂ ಸಹ ದೈಹಿಕವಾಗಿ ಹೆಚ್ಚು ಆರೋಗ್ಯವಂತರಾಗಿರುವುದಿಲ್ಲ ಎಂದರು.
ರಾಸಾಯನಿಕ ಗೊಬ್ಬರ ಬಳಕೆಯಿಂದ ಬಯೋಡೈವರ್ಸಿಟಿ ನಾಶವಾಗುತ್ತಿದ್ದು, ಎರೆಹುಳು ಸಂತತಿಯು ಸಹ ಕಣ್ಮರೆಯಾಗುತ್ತಿದೆ. ಅಂತಹ ಜಮೀನಿನಲ್ಲಿನ ಕೊಳವೆ ಬಾವಿಗಳೂ ಸಹ ಬಹುಬೇಗನೆ ಬತ್ತಿಹೋಗುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.
ಹೀಗಾಗಿ ಸಾವಯವ ಗೊಬ್ಬರ ಹಾಗೂ ಬೆಳೆ ಪದ್ಧತಿಯನ್ನು ಅನುಸರಿಸುವ ಜೊತೆಯಲ್ಲಿ ಬಹುಬೆಳೆ ಪದ್ಧತಿ ಅನುಸರಿಸಬೇಕು. ನಗರಪ್ರದೇಶಗಳಲ್ಲಿ ತಾರಸಿ ಗಾರ್ಡನ್ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಂವಾದದಲ್ಲಿ ಪ್ರಮುಖರಾದ ಶ್ರೀಪಾದ್, ವಾದಿರಾಜ್, ಆರ್‌ಎಸ್‌ಎಸ್ ಸುಬ್ಬಣ್ಣ, ಡಾ. ದತ್ತಾತ್ರೇಯ ಸೇರಿದಂತೆ ಹಲವರು ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post