ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ನಿನ್ನೆ ರಾತ್ರಿ ಇಲ್ಲಿನ ಹೊಸ ಸೇತುವೆ ರಸ್ತೆಯಲ್ಲಿ ಕಾಣಿಸಿಕೊಂಡ ಬೆಂಕಿಯನ್ನು ನಂದಿಸಲು ಸುಮಾರು 10 ಅಗ್ನಿಶಾಮಕ ವಾಹನಗಳು ನಿರಂತರವಾಗಿ ಪ್ರಯತ್ನಿಸುತ್ತಿದ್ದರೂ ಮುಂಜಾನೆ * ಗಂಟೆವರೆಗೂ ಸಂಫೂರ್ಣ ಆರಿಸಲು ಸಾಧ್ಯವಾಗಿಲ್ಲ.
ನಿನ್ನೆ ರಾತ್ರಿ 11 ಗಂಟೆಯಿಂದ ಸುಮಾರು 10 ಶಾಮಕ ವಾಹನಗಳು ನಿರಂತರವಾಗಿ ಪ್ರಯತ್ನಿಸುತ್ತಲೇ ಇವೆ. ಮುಂಜಾನೆ 6 ಗಂಟೆ ವೇಳೆಗೆ ಒಂದು ಹಂತಕ್ಕೆ ಕಡಿಮೆಯಾಗಿದ್ದ ಬೆಂಕಿ, 7 ಗಂಟೆ ವೇಳೆಗೆ ಮತ್ತೆ ಹೆಚ್ಚಾಯಿತು. ಅಗ್ನಿಶಾಮಕ ಸಿಬ್ಬಂದಿಗಳು ಒಂದು ಕ್ಷಣವೇ ವಿಶ್ರಮಿಸಿದೇ ಕಾರ್ಯಾಚರಣೆ ನಡೆಸುತ್ತಿದ್ದರೂ, 9 ಗಂಟೆಯಾದರೂ ಇನ್ನೂ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿತ್ತು.

ತಹಶೀಲ್ದಾರ್ ಭೇಟಿ, ಪರಿಶೀಲನೆ:
ಇನ್ನು, ಮುಂಜಾನೆ ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಪ್ರದೀಪ್ ಅವರು, ಪರಿಸ್ಥಿತಿಯನ್ನು ಅವಲೋಕನ ಮಾಡಿ, ಸಿಬ್ಬಂದಿಗಳಿಂದ ಮಾಹಿತಿ ಪಡೆದುಕೊಂಡರು.

ಆನಂತರ ಕಲ್ಪ ಮೀಡಿಯಾ ಹೌಸ್ ಜೊತೆಯಲ್ಲಿ ಮಾತನಾಡಿದ ಅವರು, ಬೆಂಕಿ ಹೊತ್ತಿಕೊಳ್ಳಲು ನಿಖರ ಕಾರಣ ಏನು ಎಂಬುದು ತಿಳಿದುಬಂದಿಲ್ಲ. ತನಿಖೆಯಿಂದಷ್ಟೇ ಮಾಹಿತಿ ತಿಳಿದುಬರಬೇಕಿದೆ. ಬೆಂಕಿಯ ಕೆನ್ನಾಲಿಗೆಗೆ ಅಪಾರ ಪ್ರಮಾಣದ ನಾಟಾ ಸುಟ್ಟು ಹೋಗಿದೆ. ಅಲ್ಲದೇ, ಅಕ್ಕಪಕ್ಕದ ಕಟ್ಟಡಗಳಿಗೂ ಹಾನಿಯಾಗಿದೆ. ತನಿಖೆಯಾಗುವವರೆಗೂ ಬೆಂಕಿಗೆ ಕಾರಣ ಹಾಗೂ ನಷ್ಟದ ಅಂದಾಜು ಹೇಳುವುದು ಕಷ್ಟ ಎಂದರು.

ಅಗ್ನಿಶಾಮಕ ಸಿಬ್ಬಂದಿ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪೊಲೀಸ್ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದು, ನಗರಸಭೆಯೂ ಸಹ ನೀರು ಸರಬರಾಜು ಮಾಡುವ ಮೂಲಕ ರಾತ್ರಿಯಿಂದಲೇ ಸಹಕಾರ ನೀಡುತ್ತಿದೆ ಎಂದರು.
ಸ್ಥಳದಲ್ಲಿ ಜನವೋ ಜನ:
ಇನ್ನು, ಮುಂಜಾನೆಯಾಗುತ್ತಲೇ ಬೆಂಕಿ ಅನಾಹುತದ ವಿಷಯ ತಿಳಿದು ನೂರಾರು ಮಂದಿ ಸ್ಥಳದಲ್ಲಿ ನೆರೆದಿದ್ದು, ಇವರನ್ನು ನಿಯಂತ್ರಿಸಲು ಪೊಲೀಸರು ಹೆಣಗಾಡಬೇಕಾಯಿತು.

9 ಗಂಟೆಯಾದರೂ ಬೆಂಕಿ ಸಂಪೂರ್ಣ ಆರಿರಲಿಲ್ಲ. ಅಗ್ನಿ ಶಾಮಕ ಸಿಬ್ಬಂದಿ ಕ್ಷಿಪ್ರಗತಿಯಲ್ಲಿ ಕಾರ್ಯಾಚರಣೆ ನಡೆಸುತ್ತಲೇ ಇದ್ದರು. ಆದರೆ, ನೂರಾರು ಮಂದಿ ಜಮಾಯಿಸಿದ್ದು, ತುರ್ತು ವಾಹನಗಳು ಸಂಚರಿಸಲು ಅಡ್ಡಿಯಾಗಿತ್ತು. ಹೀಗಾಗಿ, ಈ ಭಾಗ ರಸ್ತೆಯನ್ನು ಬಂದ್ ಮಾಡಿದ್ದ ಪೊಲೀಸರು, ಸಾರ್ವಜನಿಕರನ್ನು ಹಿಂದಕ್ಕೆ ಕಳುಹಿಸಲು ಭಾರೀ ಶ್ರಮವಹಿಸಬೇಕಾಯಿತು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















