ಭದ್ರಾವತಿ: ಶರಣರ ವಚನಗಳು 12ನೆಯ ಶತಮಾನಕ್ಕೆ ಸೀಮಿತವಲ್ಲ. ಪ್ರಸ್ತುತ ಹಾಗೂ ಭವಿಷ್ಯದಲ್ಲಿಯೂ ಮನುಷ್ಯನಿಗೆ ಸಮಾನತೆ, ಸಮಬಾಳು, ಸಹೋದರತೆಯನ್ನು ಪ್ರತಿಪಾದಿಸುವ ದಾರಿದೀಪವಾಗಿದೆ ಎಂದು ಶಾಸಕ ಸಂಗಮೇಶ್ವರ್ ಹೇಳಿದರು. ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಬಸವೇಶ್ವರ ಸಭಾಭವನದಲ್ಲಿ ನಡೆದ ತಾಲ್ಲೂಕು 6ನೇ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಾತಿ, ಮತ, ಧರ್ಮ, ವರ್ಣ, ಪಂಥ, ಪಂಗಡಗಳೆಂಬ ಅನಿಷ್ಠತೆಯನ್ನು ತೊಡೆದು ಮಾನವಧರ್ಮವೊಂದೇ ಶ್ರೇಷ್ಠ ಎಂಬುವುದನ್ನು ಪ್ರತಿಪಾದಿಸಿ ಮಾನವಧರ್ಮಕ್ಕೆ ಜಯವಾಗಲಿ ಎಂಬ ಭವ್ಯತೆಯನ್ನು ಸಾರುತ್ತದೆ ಎಂದರು.
ಹಸಿದು ಬಂದವರಿಗೆ ಅನ್ನವನಿತ್ತು, ದಣಿದು ಬಂದವರಿಗೆ ನೀರನಿತ್ತು, ನೊಂದು ಬಂದವರಿಗೆ ಪ್ರೀತಿ ತುಂಬಿದ ನಾಲ್ಕು ಸಾಂತ್ವನದ ಮಾತುಗಳನ್ನಾಡುವುದೇ ನಿಜವಾದ ಧರ್ಮ ಅಂತಹ ನಿಷ್ಕಲ್ಮಶವಾದ ಧರ್ಮ ಪ್ರೇಮಿಗಳು ನಾವಾಗಬೇಕು ಎಂದು ಹೇಳಿದರು. ಆದರೆ ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಜಾತಿ, ಮತ, ಧರ್ಮದ ಹೆಸರಿನಲ್ಲಿ ಕೆಸರೆರುಚುವ ಹುನ್ನಾರಗಳು ನಡೆಯುತ್ತಿದ್ದು, ನಾವೆಲ್ಲರೂ ಅಂತಹ ಕುಕೃತ್ಯಗಳಿಗೆ ಬಲಿಯಾಗದೇ ಶರಣರ ವಚನದ ಆಶೋಧ್ಯೇಯಗಳ ಸಾರದಂತೆಯೇ ನಮ್ಮೊಳಗಿರುವ ಆತ್ಮಲಿಂಗವೇ ದೇವರೆಂದು ಸಕಲ ಮನುಕುಲವನ್ನು ಪ್ರೀತಿಸಿ ಆಧರಿಸಿ ಸರ್ವಜನಾಂಗದ ಶಾಂತಿಯ ತೋಟವನ್ನಾಗಿಸುವ ನಿಟ್ಟಿನಲ್ಲಿ ಶ್ರಮಿಸಿ ಶರಣರ ಪಾದಗಳಿಗೆ ಅರ್ಥಪೂರ್ಣ ಗೌರವವನ್ನು ಸಲ್ಲಿಸುವಂತವರಾಗೋಣ, ದ್ವೇಷ ಅಸೂಯೆಗಳನ್ನು ಬದಿಗೊತ್ತಿ ಸಧೃಢ ಸಮೃದ್ಧ ಸಮಾನತೆ ಸಹೋದರತ್ವದ ಸಮಾಜವನ್ನು ಮುಂದಿನ ಪೀಳಿಗೆಗೆ ಉಡುಗೊರೆಯಾಗಿ ನೀಡೋಣವೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ಬೆಕ್ಕಿನಕಲ್ಮಠದ ಡಾ.ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳು, ಕುವೆಂಪು ವಿಶ್ವವಿದ್ಯಾನಿಲಯದ ಕುಲಪತಿ ಡಾ.ಬಿ.ಪಿ. ವೀರಭದ್ರಪ್ಪ, ಸ್ತ್ರೀ ರೋಗ ತಜ್ಞೆ, ಸಾಹಿತಿ ಡಾ. ವೀಣಾ ಭಟ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಹೆಚ್.ಎನ್. ಮಹಾರುದ್ರ, ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ವಿರುಪಾಕ್ಷಪ್ಪ, ಹಾಗೂ ಶಿವಮೊಗ್ಗ ಜಿಲ್ಲಾ ಖಜಾನೆಯ ಉಪನಿರ್ದೇಕಿ ಸಾವಿತ್ರಿ ಹೆಚ್.ಎಸ್ ಉಪಸ್ಥಿತರಿದ್ದು ಶಾಸಕರನ್ನು ಸನ್ಮಾನಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post