ಭದ್ರಾವತಿ: ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಶುಕ್ರವಾರ ಬೆಳಗಿನ ಜಾವ ತಾಲೂಕಿನ ಅರಳಿಹಳ್ಳಿ ಗ್ರಾಮದಲ್ಲಿ ಗೋಡೆ ಕುಸಿದು ಮಹಿಳೆಯೋರ್ವರು ಚಿಂತಾಜನಕ ಸ್ಥಿತಿಗೆ ತಲುಪಿ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿ ಶನಿವಾರ ಮೃತಪಟ್ಟ ಘಟನೆ ನಡೆದಿದೆ.
ಮೃತರು ಉಮೇರ ಅಂಜುಂ(30) ಎಂದು ಗುರುತಿಸಲಾಗಿದ್ದು, ಇವರೊಂದಿಗೆ ಮನೆಯಲ್ಲಿ ಪತಿ ಜಾಫರ್ ಖಾನ್, ಅತ್ತೆ ಮಾವ ಹಾಗು ಇಬ್ಬರು ಮಕ್ಕಳು ವಾಸವಾಗಿದ್ದರು. ಎಲ್ಲರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಉಮೇರ್ ಅಂಜುಂ ಮತ್ತು ಆಕೆಯ ಪತಿ ಜಾಫರ್ ಖಾನ್ ಇಬ್ಬರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತರೆ ಸಣ್ಣಪುಟ್ಟ ಗಾಯಗಳಾಗಿರುವ ಮಕ್ಕಳನ್ನು ಹಾಗು ಪೋಷಕರನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಶಾಸಕ ಬಿ.ಕೆ. ಸಂಗಮೇಶ್ವರ್, ಜಿಪಂ ಸದಸ್ಯ ಮಣಿಶೇಖರ್, ಜಿಲ್ಲಾಧಿಕಾರಿ ಶಿವಕುಮಾರ್, ಉಪ ವಿಭಾಗಾಧಿಕಾರಿ ಪ್ರಕಾಶ್, ತಹಸೀಲ್ದಾರ್ ಸೋಮಶೇಖರ್, ಕಂದಾಯಾಧಿಕಾರಿ ರವಿಕುಮಾರ್ ಮುಂತಾದವರು ಸ್ಥಳಕ್ಕೆ ಭೇಟಿ ನೀಡಿದ್ದರು. ಮೃತ ಕುಟುಂಬಕ್ಕೆ ಜಿಲ್ಲಾಡಳಿತದಿಂದ 5 ಲಕ್ಷ ರೂ. ಪರಿಹಾರ ಚೆಕ್‍ನ್ನು ಶಾಸಕ ಬಿ.ಕೆ.ಸಂಗಮೇಶ್ವರ್ ವಿತರಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post