ಭದ್ರಾವತಿ: ಅಶ್ವಥ್ ನಗರ ಆರೋಗ್ಯ ಕೇಂದ್ರದಲ್ಲಿ ಶನಿವಾರ ಪೋಷಣ್ ಅಭಿಯಾನ ಕುರಿತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ವೈದ್ಯಾಧಿಕಾರಿ ಡಾ. ಎಂ.ಆರ್. ಗಾಯತ್ರಿ ಗರ್ಭಿಣಿಯರಿಗೆ ಟಿ.ಟಿ., ಕಬ್ಬಿಣಾಂಶದ ಮಾತ್ರೆಯನ್ನು ತೆಗೆದುಕೊಳ್ಳುವ ಬಗ್ಗೆ ಹಾಗೂ ಹದಿಹರೆಯದವರ ಆರೋಗ್ಯದ ಬಗ್ಗೆ ಹಾಗೂ ಗರ್ಭಿಣಿಯರಿಗೆ ಬೇಕಾದ ಎಲ್ಲಾ ಪೌಷ್ಠಿಕ ಆಹಾರದ ಬಗ್ಗೆ ಹಾಗೂ ಗರ್ಭಿಣಿ ಮಹಿಳೆಯರಲ್ಲಿ ರಕ್ತಹೀನತೆ ಆಗದಂತೆ ಕ್ರಮವಹಿಸುವ ಬಗ್ಗೆ ಹಾಗೂ ರಕ್ತದಾನದ ಕುರಿತು ಗರ್ಭಿಣಿಯರಿಗೆ ಹಾಗು ಮಕ್ಕಳಿಗೆ ಜಂತು ಹುಳು ನಿವಾರಣೆ ಮಾತ್ರೆಗಳನ್ನು ಉಪಯೋಗಿಸುವ ಮತ್ತು ಎದೆಹಾಲಿನ ಮಹತ್ವದ ಬಗ್ಗೆ ತಿಳಿಸಿದರು.
ಶಿಶು ಅಭಿವೃದ್ಧಿ ಅಧಿಕಾರಿ ಸುರೇಶ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಅಂಗನವಾಡಿಯಲ್ಲಿ ಸಿಗುವಂತಹ ಎಲ್ಲಾ ಪೂರಕ ಮತ್ತು ಪೌಷ್ಠಿಕ ಆಹಾರವನ್ನು ತೆಗೆದುಕೊಳ್ಳುವುದರ ಕುರಿತ ಮಾಹಿತಿ ನೀಡಿ, ಎಲ್ಲಾ ಗರ್ಭಿಣಿ ತಾಯಂದಿರು ಕಡ್ಡಾಯವಾಗಿ ಬ್ಯಾಂಕ್ ಖಾತೆಯನ್ನು ತೆರೆಯಬೇಕೆಂದು ಸೂಚಿಸಿ, ಮಾತೃವಂದನ ಹಾಗೂ ಮಾತೃಶ್ರೀ ಕಾರ್ಯಕ್ರಮದ ಬಗ್ಗೆ ತಿಳಿಸಿದರು.
ಸರಕಾರಿ ನೌಕರರ ಸಂಘದ ಉಪಾಧ್ಯಕ್ಷ ನೀಲೇಶ್‍ರಾಜ್, ಅಶ್ವಥ್ ನಗರದ ಅಂಗನವಾಡಿ ಹಾಗು ಆಶಾ ಕಾರ್ಯಕರ್ತೆಯರು, ಆಸ್ಪತ್ರೆ ಸಿಬ್ಬಂದಿ ಭಾಗವಹಿಸಿದ್ದರು. ಮೋಹಿನಿ ಸ್ವಾಗತಿಸಿದರೆ, ವಿಭಾಶ್ರೀ ಪ್ರಾರ್ಥಿಸಿದರು. ಮಮತ ವಂದಿಸಿ, ಅಂಗನವಾಡಿಯ ವೇದಾ ಕಾರ್ಯಕ್ರಮ ನಿರೂಪಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post