ಭದ್ರಾವತಿ: ಬಾಲ ಕಾರ್ಮಿಕರಿಗೆ ಪ್ರೋತ್ಸಾಹಿಸುವಂತಹ ಮಾಲೀಕರ ವಿರುದ್ದ ಕಠಿಣ ಕಾನೂನು ಕ್ರಮ ಜರಗಿಸಲಾಗುವುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಕಾನೂನು ಸೇವಾ ಸಮಿತಿ ಅಧ್ಯಕ್ಷರಾದ ಪ್ರಭಾಕರ್ ರಾವ್ ಹೇಳಿದರು.
ತರೀಕೆರೆ ರಸ್ತೆಯ ಸರಕಾರಿ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ತಾಲೂಕು ಆಡಳಿತ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಪೊಲೀಸ್ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಕ್ಕಳ ಸಹಾಯವಾಣಿ ಹಾಗೂ ನಾನಾ ಕಾರ್ಮಿಕ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಬಾಲ ಕಾರ್ಮಿಕರ ಪದ್ದತಿ ವಿರೋಧಿ ದಿನಾಚರಣೆ ಅಂಗವಾಗಿ ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕಟ್ಟಡ ಕಾರ್ಮಿಕರು, ಗ್ಯಾರೇಜ್ ಮಾಲೀಕರು ಅಥವಾ ಯಾವುದೇ ಸಂಸ್ಥೆಗಳಲ್ಲಿ ಕರ್ತವ್ಯ ನಿರ್ವಹಿಸಲು ಬಾಲಕಾರ್ಮಿಕರನ್ನು ನೇಮಕ ಮಾಡಿಕೊಳ್ಳಬಾರದು. 6 ರಿಂದ 14 ವರ್ಷದೊಳಗಿನ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಆ ಮಕ್ಕಳಿಗೆ ಸರಕಾರ ಉಚಿತ ಶಿಕ್ಷಣ ನೀಡುವ ಕ್ರಮ ಕೈಗೊಂಡಿದೆ. ಅದ್ದರಿಂದ ಕಡ್ಡಾಯವಾಗಿ ಅಂತಹ ಮಕ್ಕಳನ್ನು ಶಾಲೆಗೆ ಕಳುಹಿಸುವ ಪ್ರಯತ್ನ ಮಾಡಬೇಕು. ಶಾಲೆ ತೊರೆದ ಮಕ್ಕಳನ್ನು ಪುನಃ ಶಾಲೆಗೆ ಸೇರ್ಪಡೆ ಮಾಡುವ ಕೆಲಸ ಮಾಡುವಂತಾಗಬೇಕು. ಪ್ರತಿಯೊಬ್ಬರು ಬಾಲ ಕಾರ್ಮಿಕರನ್ನು ವಿರೋಧಿಸಬೇಕಿದೆ. ಕಾನೂನನ್ನು ಯಾರು ಗೌರವಿಸುತ್ತಾರೋ ಅಂಥಹ ವ್ಯಕ್ತಿಗಳನ್ನು ಗೌರವಿಸುತ್ತದೆ.
ವಿದ್ಯಾರ್ಥಿಗಳು ತಮ್ಮ ಕಲಿಕಾ ಶಾಲಾ ಕಾಲೇಜುಗಳಲ್ಲಿ ತಿಳಿಯದ ವಿಚಾರಗಳನ್ನು ಅರಿಯುವಂತಾಗಬೇಕು. ಬಾಲ್ಯ ವಿವಾಹಗಳಿಂದ ಸಾಕಷ್ಟು ತೊಂದರೆಗಳಿರುವುದರಿಂದ ಅದರ ತಡೆಗೆ ಮುಂದಾಗಬೇಕು. ದೇವಾಲಯ ಮತ್ತಿತರೆ ಭಾಗದಲ್ಲಿ ಆಗುವ ಬಾಲ್ಯ ವಿವಾಹಗಳು ಊರ್ಜಿತವಾಗದ ಕಾರಣ ಪೋಷಕರು ಪ್ರೋತ್ಸಾಹ ನೀಡಬಾರದೆಂದರು. ಬಾಲ್ಯ ವಿವಾಹಗಳು ನಡೆಸುವಂತಹ ಪ್ರಕರಣಗಳು ಕಂಡು ಬಂದಲ್ಲಿ ಕಾನೂನು ಪ್ರಾಧಿಕಾರಕ್ಕೆ ದೂರು ನೀಡಬಹುದು. ವಿದ್ಯಾರ್ಥಿಗಳು ಮೊಬೈಲ್ ಬಳಕೆಯಿಂದ ದೂರವಿದ್ದು ಜ್ಞಾನಾರ್ಜನೆಗೆ ಒತ್ತು ನೀಡುವಂತಾಗಬೇಕು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಯೋಗ್ಯ ಕೆಲಸಗಳನ್ನು ಮಾಡುವಂತಾದಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸಾಧ್ಯ ಎಂದರು.
ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಗಣೇಶ್ ಪಡಿಯಾರ್ ಮಾತನಾಡಿ ಕಾನೂನಿನ ಅರಿವು ಇದ್ದಲ್ಲಿ ನೆರವು ದೊರೆಯಲಿದೆ. ಕಾನೂನನ್ನು ಎಲ್ಲರು ಗೌರವಿಸುವಂತಾಗಬೇಕೆಂದರು.
ವಕೀಲರ ಸಂಘದ ಅಧ್ಯಕ್ಷ ವಿ. ವೆಂಕಟೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಕೀಲರಾದ ಎಂ.ಎಲ್. ವಿಜಯ ಉಪನ್ಯಾಸ ನೀಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಸಿ. ಆನಂದ್, ಸಹಾಯಕ ಸರಕಾರಿ ಅಭಿಯೋಜಕ ಎಚ್.ಆರ್. ಶ್ರೀಧರ್, ವಕೀಲರ ಸಂಘದ ಕಾರ್ಯದರ್ಶಿ ಟಿ.ಎಸ್. ರಾಜು ಮಾತನಾಡಿದರು. ಕಾಲೇಜು ಪ್ರಾಂಶುಪಾಲ ವಿ. ನಾಗರಾಜು ಕಾಗಲ್ಕರ್, ಕಾರ್ಮಿಕ ನಿರೀಕ್ಷಕ ಪಿ. ಭೀಮೇಶ್, ವಕೀಲರ ಸಂಘದ ಉಪಾಧ್ಯಕ್ಷ ವೈ. ಜಯರಾಮ್, ಮಕ್ಕಳ ಸಹಾಯವಾಣಿ ಸಂಯೋಜಕಿ ಸುಮಿತ್ರಾ ಮುಂತಾದವರಿದ್ದರು.
ಇದೇ ಸಂದರ್ಭದಲ್ಲಿ ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರಿಗೆ ಗುರುತಿನ ಚೀಟಿ ಹಾಗೂ ಚರ್ಚಾಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿನಿಯರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post