ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ಕಾಗದನಗರ ಅಂಚೆ ಕಚೇರಿ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ದೆಯೊಬ್ಬರ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದ ಮೂವರನ್ನು ಪಿ.ಐ ಪೇಪರ್ ಟೌನ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಒಂದು ಗಂಟೆ ಅವಧಿಯಲ್ಲಿ ಬಂಧಿಸಿರುವ ಘಟನೆ ನಗರದಲ್ಲಿ ನಡೆದಿದೆ.
ಬೆಳಿಗ್ಗೆ 11:45ರ ಸುಮಾರಿನಲ್ಲಿ ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಮಹಿಳೆಯ ಬಂಗಾರದ ಸರ ಕಿತ್ತುಕೊಂಡು ಪರಾರಿಯಾಗಿದ್ದರು. ತಕ್ಷಣ ಎಚ್ಚೆತ್ತ ಸ್ಥಳೀಯರು ವಾಹನ ಹಿಂಬಾಲಿಸಿಕೊಂಡು ಹೋಗಿ ತುರ್ತು ಸಂಖ್ಯೆ 112ಕ್ಕೆ ಕರೆ ಮಾಡಿ, ದ್ವಿಚಕ್ರ ವಾಹನ ಸಂಖ್ಯೆ ಬಗ್ಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಎಲ್ಲಾ ಚೆಕ್ ಪೋಸ್ಟ್‌ಗಳಿಗೆ ಮಾಹಿತಿ ರವಾನಿಸಿ, ಮಧ್ಯಾಹ್ನ 12:45ರ ಸಮಯದಲ್ಲಿ ಕಾರೇಹಳ್ಳಿ ಚೆಕ್ ಪೋಸ್ಟ್‌ನಲ್ಲಿ ಮಹಿಳೆಯ ಸರ ಅಪಹರಿಸಿದ್ದವರು ಸಿಕ್ಕಿ ಬಿದ್ದಿದ್ದಾರೆ ಎನ್ನಲಾಗಿದೆ.
ಎರೇಹಳ್ಳಿ ಗ್ರಾಮದ ಪವನ್(19), ಉಂಬ್ಳೆಬೈಲ್ ರಸ್ತೆ ಸಂಜಯ್ ಕಾಲೋನಿ ನಿವಾಸಿ ವಿ. ವಿಷ್ಣು ಅಲಿಯಾಸ್ ಪೊಲ್ಲಾರ್ಡ್(19) ಮತ್ತು ಹೆಬ್ಬಂಡಿ ಗ್ರಾಮದ ಎಮ್. ಮಹೇಶ್(19) ಬಂಧಿತ ಆರೋಪಿಗಳಾಗಿದ್ದು, ಒಂದು ಬಂಗಾರದ ಸರ ಮತ್ತು 2 ಲಕ್ಷ್ಮೀ ಕಾಸ್ ಸೇರಿದಂತೆ ಒಟ್ಟು 103 ಗ್ರಾಂ ತೂಕದ ಒಟ್ಟು 4,63,500 ರೂ. ಮೌಲ್ಯದ ಬಂಗಾರದ ಆಭರಣಗಳನ್ನು ಹಾಗೂ ಕೃತ್ಯಕ್ಕೆ ಬಳಸಿದ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತರು 2019ರಲ್ಲಿ ಪೇಪರ್‌ಟೌನ್ ಪೊಲೀಸ್ ಠಾಣೆ ಹಾಗೂ ನ್ಯೂಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಜಿಲ್ಲಾ ಪೊಲೀಸ್ ಅಧೀಕ್ಷಕ, ಹೆಚ್ಚುವರಿ ಅಧೀಕ್ಷಕ ಹಾಗೂ ಸಹಾಯಕ ಅಧೀಕ್ಷಕರ ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‌ಪೆಕ್ಟರ್ ಈ.ಓ. ಮಂಜುನಾಥ್, ಪೇಪರ್‌ಟೌನ್ ಠಾಣಾಧಿಕಾರಿಗಳಾದ ಶಿಲ್ಪಾ ನಾಯನೇಗಲಿ, ಸಹಾಯಕ ಠಾಣಾಧಿಕಾರಿ ರತ್ನಾಕರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಚನ್ನಕೇಶವ, ಅರುಣ, ಗಂಗಾಧರ, ಹನಮಂತ ಆವಟ್ಟಿ, ಚಿನ್ನನಾಯ್ಕ, ಧರ್ಮನಾಯ್ಕ ಮತ್ತು ಮಂಜುನಾಥ ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post