ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ವಿಐಎಸ್‌ಎಲ್ ಕಾರ್ಖಾನೆಯನ್ನು ಉಳಿಸಿಕೊಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಮನವೊಲಿಸುವಂತೆ ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿಯವರಿಗೆ ಕಾರ್ಮಿಕರು ಮನವಿ ಮಾಡಿದ್ದಾರೆ.
ನಾಗಮಂಗಲ ತಾಲೂಕಿನಲ್ಲಿರುವ ಶ್ರೀ ಮಠಕ್ಕೆ ತೆರಳಿದ ಕರ್ತವ್ಯನಿರತ ಕಾರ್ಮಿಕರು, ನಿವೃತ್ತ ಕಾರ್ಮಿಕರು ಹಾಗೂ ಗುತ್ತಿಗೆ ಕಾರ್ಮಿಕರ ಪ್ರಮುಖರು ಸ್ವಾಮೀಜಿಯವರನ್ನು ಭೇಟಿಯಾಗಿ ಈ ಕುರಿತಂತೆ ಮನವಿ ಸಲ್ಲಿಸಿದ್ದಾರೆ.
ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯ ದೂರದೃಷ್ಟಿಯಿಂದ ಅಂದಿನ ಮೈಸೂರು ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಂದ 1923ರಲ್ಲಿ ಕಾರ್ಖಾನೆ ನಿರ್ಮಾಣಗೊಂಡಿದ್ದು, ಸರ್ಕಾರದ ಮಾಲೀಕತ್ವದ ಮೊದಲ ಏಕೈಕ ಕಾರ್ಖಾನೆ ಇದಾಗಿದ್ದು, ವಿಶೇಷ ಮಿಶ್ರ ಉಕ್ಕು ಉತ್ಪಾದನೆಗೆ ದೇಶ ವಿದೇಶಗಳಲ್ಲೇ ಹೆಸರು ಮಾಡಿದೆ. ಇಂತಹ ಕಾರ್ಖಾನೆ ಇಂದು ಮುಚ್ಚವ ಸ್ಥಿತಿಗೆ ಬಂದಿರುವುದು ದುಃಖಕರ ಸಂಗತಿ ಎಂದು ಅಳಲು ತೋಡಿಕೊಂಡರು.
ದೇಶದ ಪ್ರಧಾನಿಗೆ ತನ್ನದೇ ಆದ ಕೊಡುಗೆ ನೀಡಿರುವ ಈ ಕಾರ್ಖಾನೆಯನ್ನು ನಂಬಿ ಲಕ್ಷಾಂತರ ಮಂದಿ ಬದುಕು ಕಟ್ಟಿಕೊಂಡಿದ್ದಾರೆ. ಹೀಗಾಗಿ ಕಾರ್ಖಾನೆ ಮುಚ್ಚುವ ನಿರ್ಧಾರ ಕೈಬಿಟ್ಟು ಆಧುನಿಕ ತಂತ್ರಜ್ಞಾನ ಬಳಸಿ ಬಂಡವಾಳ ತೊಡಗಿಸಿ ಗತ ವೈಭವವನ್ನು ಮರುಕಳಿಸಬೇಕಿದೆ. ಈ ನಿಟ್ಟಿನಲ್ಲಿ ತಾವು ಪ್ರಧಾನಿಯವರ ಮನವೊಲಿಸುವ ಪ್ರಯತ್ನ ಮಾಡಬೇಕು ಎಂದು ವಿನಂತಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಕಾಳೇಗೌಡ, ನರಸಿಂಹಾಚಾರ್, ಚಂದ್ರಕಾಂತ್, ಸುರೇಶ್, ಪ್ರದೀಪ್, ಶೈಲಶ್ರೀ, ಅನ್ನಪೂರ್ಣ ಸತೀಶ್, ಪತಂಜಲಿ ಕುಮಾರಸ್ವಾಮಿ, ಮಂಜುನಾಥ್, ವಾಸುದೇವ, ಅರುಣ್, ವಿಜಯಕುಮಾರ್, ಶಿವರಂಗ ಸೇರಿದಂತೆ ಹಲವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post