ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳವಾಡಿಕೊಂಡು ಕೊಲೆ ಮಾಡಿದ್ದ ನಗರದ 8 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.
ಈ ಕುರಿತಂತೆ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ನ್ಯಾಯಾಧೀಶರಾದ ಮೈಲಸ್ವಾಮಿ ಚೆಟ್ಟಿಯಾರ್ ಅವರು ಆದೇಶ ಹೊರಡಿಸಿದ್ದು, 8 ಆರೋಪಿಗಳ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ.
ಏನಿದು ಪ್ರಕರಣ?
ಹನುಮಂತನಗರದ ವಾಸಿ, ಶಾರುಖ್ ಖಾನ್(26) ಹಾಗೂ ಅದೇ ಏರಿಯಾದ ವಾಸಿಯಾದ ಹಂದಿ ರಮೇಶ ಮತ್ತಿತರರಿಗೂ ಹಣದ ವಿಚಾರವಾಗಿ ಗಲಾಟೆಯಾಗಿತ್ತು. 2020ರ ಸೆ.30 ರಂದು ರಾತ್ರಿ ರಮೇಶ ಹಾಗೂ ಆತನ ಕಡೆಯವರು ಶಾರೂಖ್ ಮನೆಯ ಬಳಿ ಬಂದು ಶಾರೂಕ್ ಅನ್ನು ಬಿಡುವುದಿಲ್ಲ ಸಾಯಿಸಿ ಬಿಡುತ್ತೇವೆ ಎಂದು ಬೆದರಿಕೆ ಹಾಕಿ ಹೋಗಿದ್ದರು.
ನಂತರ ಹಂದಿ ರಮೇಶ ಮತ್ತು ಆತನ ಸಹಚರರು ಸೇರಿ ಹಳೆಯ ದ್ವೇಷದಿಂದ ಶಾರೂಖ್ ನನ್ನು ಕೊಲೆ ಮಾಡಿದ್ದರು. ಇದರ ವಿರುದ್ಧ ಹೊಸಮನೆ ಪೊಲೀಸ್ ಠಾಣೆ ದೂರು ದಾಖಲಾಗಿತ್ತು. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದರು.
ಪ್ರಕರಣದಲ್ಲಿ ಆಗಿನ ತನಿಖಾಧಿಕಾರಿಗಳಾದ ಭದ್ರಾವತಿ ನಗರ ವೃತ್ತ ಸಿಪಿಐ ರಾಘವೇಂದ್ರ ಕಾಂಡಿಕೆ ಅವರು ತನಿಖೆ ಕೈಗೊಂಡು ಆರೋಪಿಗಳನ್ನು ಬಂಧಿಸಿ, ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ನ್ಯಾಯಾಲಯದಲ್ಲಿ ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪಿ. ರತ್ನಮ್ಮ ವಾದ ಮಂಡಿಸಿದ್ದರು.
ವಿಚಾರಣೆ ಆಲಿಸಿದ ಘನ 4ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಶಿವಮೊಗ್ಗ (ಪೀಠಾಸೀನ ಭದ್ರಾವತಿ) ಆರೋಪಿತರ ವಿರುದ್ಧ ಆರೋಪ ದೃಡಪಟ್ಟ ಹಿನ್ನೆಲೆಯಲ್ಲಿ ತೀರ್ಪು ಪ್ರಕಟಿಸಿದೆ.
ಇವರುಗಳೇ ಜೀವಾವಧಿ ಶಿಕ್ಷೆಗೆ ಗುರಿಯಾದವರು?
ಹೊಸಮನೆಯ ಹಂದಿ ರಮೇಶ(44), ಹನುಮಂತನಗರದ ವೆಂಕಟರಾಮ(35), ಚಂದ್ರ(37), ಸತ್ಯಸಾಯಿ ನಗರದ ಕಾರ್ತಿಕ್(24), ಮಧುಸೂಧನ್(28), ರಮೇಶ್(37), ಹೊಸಮನೆಯ ನಾಗರಾಜ(25), ಸತ್ಯಸಾಯಿ ನಗರದ ಸಿದ್ದಪ್ಪ(48) ಎನ್ನುವವರೇ ಜೀವಾವಧಿ ಶಿಕ್ಷೆಗೆ ಗುರಿಯಾದವರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















