ಭದ್ರಾವತಿ: ಕೇಂದ್ರ ಉಕ್ಕು ಪ್ರಾಧಿಕಾರಕ್ಕೊಳಪಟ್ಟ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗೆ ಸಂಸದ ಬಿ.ವೈ.ರಾಘವೇಂದ್ರ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರವರ ಹೋರಾಟದ ಫಲವಾಗಿ ಕೇಂದ್ರ ಸರಕಾರ ಗಣಿ ಮಂಜೂರಾತಿ ನೀಡಿದೆ. ಇನ್ನು ಕೆಲವೆ ದಿನದಲ್ಲಿ ಕಾರ್ಖಾನೆಗೆ ಅಗತ್ಯ ಬಂಡವಾಳ ತೊಡಗಿಸುವ ಮತ್ತು ಬಂಡವಾಳ ಹಿಂತೆಗೆತ / ಖಾಸಗೀಕರಣ ಪ್ರಕ್ರಿಯೆ ಕೈಬಿಡಲಾಗುವ ಭರವಸೆ ಪಡೆದಿದ್ದೇವೆ ಎಂದು ಬಿಜೆಪಿ ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ರಾಜ್ಯ ಸರಕಾರ ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ರಮಣದುರ್ಗ ಎನ್‌ಇಬಿ ಅರಣ್ಯ ವ್ಯಾಪ್ತಿಯ ಬ್ಲಾಕ್ ನಂ. 13/ಎ ಭೂಮಿಯಲ್ಲಿ 150 ಎಕರೆ ಕಬ್ಬಿಣದ ಅದಿರು ಗಣಿಯನ್ನು ವಿಐಎಸ್‌ಎಲ್ ಕಾರ್ಖಾನೆಗೆ ನೀಡಲು ಕೇಂದ್ರ ಸರಕಾರಕ್ಕೆ ಮಂಜೂರಾತಿಗಾಗಿ ಶಿಫಾರಸ್ಸು ಮಾಡಿ ಅಧಿಕೃತವಾಗಿ ಗಜೆಟ್‌ನಲ್ಲಿ ಅಧಿಸೂಚನೆ ಹೊರಡಿಸಿದೆ. ಸಂಸದ ಬಿ.ವೈ.ರಾಘವೇಂದ್ರ ನೇತೃತ್ವದಲ್ಲಿ ಕಳೆದ ಫೆ: 5 ರಂದು ದೆಹಲಿಗೆ ಸ್ಥಳೀಯ ಬಿಜೆಪಿ ನಗರ ಮತ್ತು ಗ್ರಾಮಾಂತರ ಘಟಕಗಳ ಅಧ್ಯಕ್ಷರಾದ ಜಿ.ಆನಂದಕುಮಾರ್ ಮತ್ತು ಮಂಗೋಟೆ ರುದ್ರೇಶ್ ಹಾಗು ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಒಳಗೊಂಡ ನಿಯೋಗವು ಕೇಂದ್ರ ಉಕ್ಕು ಸಚಿವ ನರೇಂದ್ರ ಸಿಂಗ್ ಥೋಮರ್ ಹಾಗು ಸೈಲ್ ಛರ‍್ಮನ್ ಅನಿಲ್ ಚೌದರಿ ಮತ್ತಿತರರನ್ನು ಭೇಟಿಮಾಡಿ ನೀಡಿದ್ದ ಭರವಸೆಗಳನ್ನು ಪೂರೈಸುವಂತೆ ಮನವಿ ಸಲ್ಲಿಸಿ ಒತ್ತಾಯಿಸಲಾಗಿತ್ತು.
ಇದರ ಅನ್ವಯ ಕೇವಲ 15 ದಿನಗಳಲ್ಲಿ ಕೇಂದ್ರ ಸರಕಾರ 150 ಎಕರೆ ಅದಿರುಗಣಿ ಮಂಜೂರಾತಿ ನೀಡಿ ರಾಜ್ಯ ಸರಕಾರಕ್ಕೆ ಕಳುಹಿಸಿಕೊಟ್ಟಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆ ಉಳಿಸಿ ಬೆಳಸಲು ಹಾಗು ಕಾರ್ಮಿಕ ಕುಟುಂಬಗಳ ಒಳಿತಿಗಾಗಿ ಬಂಡವಾಳ ತೊಡಗಿಸುವ ಭರವಸೆ ದೊರೆತಿದೆ. ಈ ಶ್ರಮದ ಹಿಂದೆ ಸಂಸದರ ಶ್ರಮ ಅಪಾರವಾಗಿದೆ. ಖಾಸಗೀಕರಣದಿಂದ ಕೈ ಬಿಡುವಂತೆ ಸಂಸದರು ಕೇಂದ್ರಕ್ಕೆ ತೀವ್ರ ಒತ್ತಡ ಹೇರಿದ್ದಾರೆ. ನೀಡಿರುವ ಗಣಿಯಿಂದಾಗಿ ಕಾರ್ಖಾನೆಗೆ ಮರುಜೀವ ಬಂದಂತಾಗಿದೆ. ಅಲ್ಲದೆ ನೀಡಿರುವ ಅದಿರುಗಣಿಗೆ ತೆರಿಗೆ ಮತ್ತು ರಾಯಲ್ಟಿ ಇಲ್ಲದ ಗಣಿಯನ್ನಾಗಿ ನೀಡಿರುವುದು ಕಾರ್ಖಾನೆಯ ಭವಿಷ್ಯಕ್ಕೆ ಮತ್ತೊಂದು ದಾರಿ ದೀಪವಾಗಿದೆ. ಗಣಿ ಮಂಜೂರಾತಿ ವಿಚಾರವು ರಾಜಕೀಯ ಮುಕ್ತವಾಗಿದೆ. ಈ ಹಿಂದೆ ಕಾರ್ಖಾನೆ ಉಳಿವಿಗೆ ಹಾಗು ಅದಿರುಗಣಿ ಮಂಜೂರಾತಿಗಾಗಿ ಕಾರ್ಮಿಕ ಸಂಘ, ಚುನಾಯಿತ ಪ್ರತಿನಿಧಿಗಳು, ಹಾಲಿ ಮಾಜಿ ಶಾಸಕರುಗಳ ಹಾಗು ವಿವಿಧ ಸಂಘ ಸಂಸ್ಥೆಗಳ ಹೋರಾಟವನ್ನು ಸಹ ನಾವು ಮರೆಯದೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಮಂಗೋಟೆ ರುದ್ರೇಶ್ ತಿಳಿಸಿದರು.
ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷ ಜೆ.ಜಗದೀಶ್ ಮಾತನಾಡಿ ಕೇಂದ್ರ ಪರಿಸರ ಸಚಿವಾಲಯ ಅದಿರು ಗಣಿಗಾರಿಕೆ ಸ್ಥಗಿತಗೊಳಿಸಿದ ನಂತರ ಸುಮಾರು 2 ದಶಕಗಳಿಂದ ಸ್ವಂತ ಗಣಿಗಾಗಿ ಎದುರು ನೋಡುತ್ತಿದ್ದ ವಿಐಎಸ್‌ಎಲ್ ಕಾರ್ಖಾನೆಗೆ ಕೊನೆಗೂ ಗಣಿ ಮಂಜೂರಾತಿ ಆಗಿದ್ದು, ಮುಚ್ಚುವ ಹಂತಕ್ಕೆ ತಲುಪಿದ್ದ ಕಾರ್ಖಾನೆಗೆ ಮರು ಜೀವ ಬಂದಂತಾಗಿ ಕಾರ್ಮಿಕರು ನಿಟ್ಟಿಸಿರು ಬಿಡುವಂತಾಗಿದೆ. ಕೇಂದ್ರದ ನೀತಿ ಆಯೋಗವು ವಿಐಎಸ್‌ಎಲ್ ಕಾರ್ಖಾನೆಯನ್ನು ಖಾಸಗೀಕರಣಗೊಳಿಸಲು ಹೊರಟ್ಟಿದ್ದ ದಿನಗಳಲ್ಲಿಯೆ ಕೇಂದ್ರ ಸರಕಾರ ಅದಿರುಗಣಿ ಮಂಜೂರು ಮಾಡಿರುವುದು ಸಂತಸ ತಂದಿದೆ.
ಇದರ ಹಿಂದೆ ಸಂಸದ ರಾಘವೇಂದ್ರ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ರವರ ಶ್ರಮ ಅನನ್ಯವಾಗಿದೆ. ರಾಷ್ಟ ಬಿಜೆಪಿ ಅಧ್ಯಕ್ಷ ಅಮಿತ್ ಷಾ ರವರು ಯಡಿಯೂರಪ್ಪ ರವರಿಗೆ ಕಾರ್ಖಾನೆ ಉಳಿಸುವ ಭರವಸೆ ಮತ್ತು ವಾಗ್ದಾನವು ನಮ್ಮನ್ನು ಹುಬ್ಬೇರಿಸುವಂತೆ ಮಾಡಿದೆ. ಮಂಜೂರಾಗಿರುವ 150 ಎಕರೆ ಭೂಮಿಯಲ್ಲಿ 70 ಮಿಲಿಯನ್ ಟನ್ ಕಬ್ಬಿಣದ ಅದಿರು ಇರುವುದು ಸಮೃದ್ದಿ ತಂದಿದೆ. ಮುಂದಿನ ದಿನಗಳಲ್ಲಿ ಕಾರ್ಖಾನೆಗೆ ಅದೃಷ್ಟದ ಬಾಗಿಲು ತೆರೆದಂತಾಗಿದೆ ಎಂದು ಹರ್ಷವ್ಯಕ್ತಪಡಿಸಿದರು.
ನಗರ ಬಿಜೆಪಿ ಘಟಕ ಅಧ್ಯಕ್ಷ ಜಿ.ಆನಂದಕುಮಾರ್ ಮಾತನಾಡಿ ಸಂಸದರ ಶ್ರಮ, ಮಾಜಿ ಸಿಎಂ ರವರ ಹೋರಾಟ ಹಾಗು ಕಾರ್ಮಿಕರ ಮತ್ತು ಎಲ್ಲಾ ಜನಪ್ರತಿನಿಧಿಗಳ ಒತ್ತಡಗಳಿಂದ ರಾಜ್ಯ ಸರಕಾರ ಅದಿರುಗಣಿ ನೀಡಿ ಶಿಫಾರಸ್ಸು ಮಾಡಿದಂತೆ ಕೇಂದ್ರವು ಮಂಜೂರಾತಿ ನೀಡಿದೆ. ಮುಂದಿನ ದಿನದಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರುವುದು ಖಚಿತವಾಗಿರುವುದರಿಂದ ಕಾರ್ಖಾನೆಗೆ ಉಜ್ವಲ ಭವಿಷ್ಯ ದೊರೆಯುವುದರಲ್ಲಿ ಅನುಮಾನವಿಲ್ಲ ಎಂದು ಶ್ರಮಿಸಿದ ಎಲ್ಲರನ್ನು ಅಭಿನಂದಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post