ಭದ್ರಾವತಿ: ಹಳೇನಗರದ ಕಂಚಿನ ಬಾಗಿಲು ಶ್ರೀಆಂಜನೇಯ ಸ್ವಾಮಿ ದೇವಾಲಯದ ಮಹಾ ರಥೋತ್ಸವವು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ನೆರವೇರಿತು.
ಬೆಳಿಗ್ಗೆ ನವಗ್ರಹ ಹೋಮ, ಆದಿವಾಸ ಹೋಮ ರಥ ಶುದ್ಧಿಹೋಮ, ರಥಾಧಿವಾಸ ಹೋಮ ಹಾಗೂ ಶ್ರೀ ಸ್ವಾಮಿಯ ರಥಾರೋಹಣ ನೆರವೇರಿತು. ಮಧ್ಯಾಹ್ನ 12 ಗಂಟೆಗೆ ಜರುಗಿದ ಮಹಾರಥೋತ್ಸವದಲ್ಲಿ ನೆರೆದಿದ್ದ ಭಕ್ತರು ರಥಕ್ಕ ಬಾಳೆಹಣ್ಣು, ಉತ್ತತ್ತೆ, ಕರಿಮೆಣಸು ಎರಚುವ ಮೂಲಕ ಭಕ್ತಿ ಸಮರ್ಪಿಸಿದರು.
ದೇವಾಲಯದ ಆವರಣದಿಂದ ಹೊರಟ ಮೆರವಣಿಗೆಯು ರಂಗಪ್ಪ ವೃತ್ತ, ಅಂಬೇಡ್ಕರ್ ವೃತ್ತ ಮಾರ್ಗವಾಗಿ ಪುನಃ ದೇವಾಲಯದ ಆವರಣಕ್ಕೆ ತಲುಪಿತು. ನೆರೆರಿದ್ದ ಭಕ್ತರಿಗೆ ಅನ್ನ ಸಂತರ್ಪಣೆ, ಪ್ರಸಾದ ನಿಯೋಗ ಜರುಗಿತು. ಇದಕ್ಕು ಮುನ್ನ ದೇವರ ಉತ್ಸವ ಮೂರ್ತಿಯನ್ನು ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವಾಲಯದವರೆಗೆ ಮೆರವಣಿಗೆ ಮೂಲಕ ತರಲಾಯಿತು. ಪೂಜೆಯ ನಂತರ ಶ್ರೀ ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಅಲಂಕೃತಗೊಂಡ ರಥದಲ್ಲಿ ಪ್ರತಿಷ್ಠಾಪಿಸಲಾಯಿತು.
ಮಹಾ ರಥೋತ್ಸವ ಸಂದರ್ಭದಲ್ಲಿ ಶಾಸಕ ಬಿ.ಕೆ. ಸಂಗಮೇಶ್ವರ್, ತಹಸೀಲ್ದಾರ್ ಸೋಮಶೇಖರ್, ಗ್ರೇಡ್-2 ತಹಸೀಲ್ದಾರ್ ಮಂಜಾನಾಯ್ಕ, ತಾಪಂ ಇಒ ತಮ್ಮಣ್ಣಗೌಡ, ಉಪ ತಹಸೀಲ್ದಾರರಾದ ಮಲ್ಲಿಕಾರ್ಜುನ್, ನಾರಾಯಣಗೌಡ, ದೇವಾಲಯ ಸಮಿತಿಯ ನರಸಿಂಹಮೂರ್ತಿ, ಜವರೇಗೌಡ, ಅರ್ಚಕ ಪವನ್ ಕುಮಾರ್ ಉಡುಪ ಸೇರಿದಂತೆ ಸಹಸ್ರಾರು ಭಕ್ತರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ, ಭದ್ರಾವತಿ)
Discussion about this post