ಭದ್ರಾವತಿ: ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಂಗಳವಾರ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಹನುಮಂತಾಪುರ ಕ್ಷೇತ್ರದ ಎಂ.ಎಸ್. ಚಂದ್ರಶೇಖರ್ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕಾಗೇಕೋಡಮಗ್ಗೆ ಕ್ಷೇತ್ರದ ಟಿ.ಎಂ. ರತ್ನಮ್ಮ ನಿಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದೆ ಜೆಡಿಎಸ್ ಬೆಂಬಲಿತ ಅಭ್ಯರ್ಥಿ ಜಯರಾಮ್ 18 ತಿಂಗಳ ಕಾಲ ಅಧ್ಯಕ್ಷರಾಗಿ ಅಧಿಕಾರ ಮಾಡಿದ್ದರು. ನಂತರ ಮಾತಿನ ಒಡಂಬಡಿಕೆಯಂತೆ ರಾಜೀನಾಮೆ ಸಲ್ಲಿಸಿದ್ದರ ಪರಿಣಾಮ ತೆರವಾಗಿದ್ದ ಸ್ಥಾನಕ್ಕೆ ಎಂ.ಎಸ್. ಚಂದ್ರಶೇಖರ್ ಅಧ್ಯಕ್ಷರಾಗಿ ಆಯ್ಕೆಯಾಗಿ 50 ದಿನಗಳ ಕಾಲ ಅಧಿಕಾರ ಮಾಡಿದ್ದರು. ಪುನಃ ಮಂಗಳವಾರ ನಡೆದ ಚುನಾವಣೆಯಲ್ಲಿ ಎಂ.ಎಸ್. ಚಂದ್ರಶೇಖರ್ ಮರು ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿ ಎಂ.ಆರ್. ನಾಗರಾಜ್ ಕಾರ್ಯನಿರ್ವಹಿಸಿದ್ದರು. ಚುನಾವಣಾ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಇವರಿಬ್ಬರನ್ನು ಹೊರತು ಪಡಿಸಿ ಬೇರೆ ಯಾರು ನಾಮಪತ್ರ ಸಲ್ಲಿಸಿದ ಕಾರಣ ಅವಿರೋಧವಾಗಿ ಚುನಾಯಿತರಾಗಿದ್ದಾರೆ. ಎಪಿಎಂಸಿಯ ಒಟ್ಟು 17 ನಿರ್ದೇಶಕರ ಪೈಕಿ ಜೆಡಿಎಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ ಸದಸ್ಯರು 2 ಹಾಗು ಕಾಂಗ್ರೆಸ್ ಬೆಂಬಲಿತ 7 ಸದಸ್ಯರಿದ್ದಾರೆ. ಜೆಡಿಎಸ್ ಮತ್ತು ಬಿಜೆಪಿ ಒಟ್ಟು 10 ಮಂದಿ ಸದಸ್ಯರು ಒಗ್ಗೂಡಿ ಅಧಿಕಾರ ಹಂಚಿಕೊಂಡಿದ್ದಾರೆ.
ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯ ಡಾ.ಎಚ್. ನಾಗೇಶ್, ನಾಮನಿರ್ದೇಶನ ಸದಸ್ಯರಾದ ದಶರಥಗಿರಿ, ಇಸ್ಮಾಯಿಲ್ ಖಾನ್ ಮತ್ತು ಲಲಿತಮ್ಮ ಭಾಗವಹಿಸಿದ್ದರೆ, ಇನ್ನುಳಿದ 3 ಮಂದಿ ಸದಸ್ಯರು ಗೈರು ಹಾಜರಿಯಾಗಿದ್ದರು. ಜೆಡಿಎಸ್ ಮುಖಂಡರಾದ ಎಸ್. ಕುಮಾರ್, ಕುಮ್ರಿ ಚಂದ್ರಣ್ಣ, ಜಿಪಂ ಸದಸ್ಯರಾದ ಜೆ.ಪಿ. ಯೋಗೀಶ್, ಮಣಿಶೇಖರ್, ಜಯರಾಮ್, ಸುಜಾತ ಸೇರಿದಂತೆ ಅನೇಕ ಮುಖಂಡರು ಭಾಗವಹಿಸಿದ್ದರು.
ಹೊಳೆಹೊನ್ನೂರು ಬಿಜೆಪಿ ಮುಖಂಡರಾದ ಷಡಾಕ್ಷರಿ, ಮಹೇಶ್ವರಪ್ಪ ಮುಂತಾದವರು ಉಪಸ್ಥಿತರಿದ್ದು ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಉಪಾಧ್ಯಕ್ಷರಿಗೆ ಶುಭ ಹಾರೈಸಿದರು. ಎಪಿಂಎಸಿ ಕಾರ್ಯದರ್ಶಿ ಮಹೇಶ್, ಅಧಿಕಾರಿಗಳಾದ ಜನಾರ್ಧನ್, ಜೋಯಿಸ್ ಮುಂತಾದವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post