ಭದ್ರಾವತಿ: ಮೈಸೂರು ಕಾಗದ ಕಾರ್ಖಾನೆಯಲ್ಲಿ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರಿಗೆ ನೀಡಬೇಕಾದ ಬಾಕಿ ಹಣಕ್ಕೆ ಸತಾವಣೆ ಮಾಡಬೇಡಿ, ಕಾರ್ಮಿಕರ ಹೊಟ್ಟೆಯ ಮೇಲೆ ಹೊಡೆಯಬೇಡಿ, ವೈಯಕ್ತಿಕ ದ್ವೇಷ ಸಾಧಿಸಬೇಡಿ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಕಾರ್ಖಾನೆಯ ಉನ್ನತ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಎಂಪಿಎಂ ಕಾರ್ಖಾನೆಯ ಮುಖ್ಯದ್ವಾರದ ಮುಂದೆ ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರು ಮತ್ತು ಕುಟುಂಬ ಸದಸ್ಯರು ಪ್ರತಿಭಟನಾ ನಂತರ ಮಾಜಿ ಶಾಸಕ ಎಂ.ಜೆ. ಅಪ್ಪಾಜಿ ಸಂಜೆ ಕಾರ್ಖಾನೆಯ ಆಡಳಿತ ಕಛೇರಿಗೆ ತೆರಳಿ ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ಅನೇಕ ಕಾರ್ಮಿಕ ಮುಖಂಡರು ಅಧಿಕಾರಿಗಳ ನಿರ್ಲಕ್ಷತನವನ್ನು ಖಂಡಿಸಿದರು.
ಸ್ವಯಂ ನಿವೃತ್ತಿ ಪಡೆದ ಕಾರ್ಮಿಕರು ಬಾಕಿ ಹಣಕ್ಕಾಗಿ ಪರದಾಡುತ್ತಿದ್ದಾರೆ. 2 ವರ್ಷ ಗತಿಸಿದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ. ನ್ಯಾಯಬದ್ದವಾಗಿ ನೀಡಬೇಕಾದ ಸೌಲತ್ತು ನೀಡಿಲ್ಲ. ಪಿಎಫ್, ಗ್ರ್ಯಾಚ್ಯುಟಿ, ಪೆನ್ಷನ್, ಬ್ಯಾಕ್‌ಲಾಗ್ ಉದ್ಯೋಗಿಗಳಿಗೆ ಸಂಬಳ, ಎನ್‌ಕ್ಯಾಷ್‌ಮೆಂಟ್, ಲೇಟ್ ಆಫ್ ಸ್ಯಾಲರಿ, ಬೋನಸ್ ಇತ್ಯಾದಿಗಳನ್ನು ನೀಡದೆ ಸತಾವಣೆ ಯಾಕೆ ಮಾಡುತ್ತಿದ್ದೀರಿ ಎಂದು ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು. ನೀಡಬೇಕಾದ ನ್ಯಾಯಬದ್ದ ಹಣ ನೀಡದೇ ಕಾಣದ ಕೈಗಳ ಚಿತಾವಣೆಯಿಂದ ಕಾರ್ಮಿಕರು ವಾಸ ಮಾಡುತ್ತಿರುವ ಮನೆಗಳನ್ನು ಖಾಲಿ ಮಾಡುವಂತೆ ನೋಟೀಸ್ ನೀಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಕಾರ್ಮಿಕರಿಗೆ ನೀಡಬೇಕಾದ ಹಣವನ್ನು ಕೊಟ್ಟ ನಂತರ ಮನೆಗಳನ್ನು ಖಾಲಿ ಮಾಡಿಸಿ ಇಲ್ಲವಾದಲ್ಲಿ ತೆರವು ಅಸಾಧ್ಯ. ಅಧಿಖಾರಿಗಳು ಮನಸು ಮಾಡಿದ್ದಲ್ಲಿ ಹಾಗೂ ಸರಕಾರಕ್ಕೆ ಮತ್ತು ಆಡಳಿತ ಮಂಡಳಿಗೆ ನೀಡುವ ವರದಿ ಆಧಾರದ ಮೇಲೆ ಸರಕಾರ ಒಪ್ಪಿಗೆ ನೀಡುತ್ತದೆ. ಅದ್ದರಿಂದ ಅಧಿಕಾರಿಗಳಾದ ನೀವು ಧ್ವೇಷ ಸಾಧಿಸದೆ ನೀಡಬೇಕಾದ ಹಣ ಪಾವತಿಸಿ ಮನೆಗಳನ್ನು ಹಿಂಪಡೆಯಬಹುದೆಂದು ವರದಿ ಕಳುಹಿಸಿ ಎಂದು ಪಟ್ಟು ಹಿಡಿದರಲ್ಲದೆ, ಕಾರ್ಮಿಕರಿಗೆ ನೀಡಬೇಕಾದ ಚೆಕ್ ಕೊಡಿ ಇತ್ತ ಮನೆ ಬೀಗದ ಕೈ ಪಡೆಯಿರಿ. ನಾನೇ ಮನೆ ಖಾಲಿ ಮಾಡಿಸುವ ಜವಾಬ್ದಾರಿ ಹೋರುವುದಾಗಿ ಗಟ್ಟಿ ಧ್ವನಿಯಲ್ಲಿ ಗುಡುಗಿದರು. ಸೂಪರ್ ಅನಿಯೇಷನ್ ವಿಚಾರದಲ್ಲಿ ಸಾಕಷ್ಟು ನ್ಯೂನತೆಗಳಿವೆ. ಸಂಬಂಧಿತ ಅಧಿಕಾರಿ ಬಾಲಚಂದ್ರ ಗುತ್ತಲ್ ಬೇಕೆಂದೆ ಕಾರ್ಮಿಕರಿಗೆ ಹಿಂಸೆ ನೀಡುತ್ತಿದ್ದಾರೆಂದು ಅಪ್ಪಾಜಿ ಆರೋಪಿಸಿ ಅಧಿಕಾರಿಗಳಾದ ನೀವು ಸಹ ಕಾರ್ಖಾನೆಯಿಂದ ಹೊರ ಬಂದಮೇಲೆ ಕಾರ್ಮಿಕರ ಶಾಪದ ನೋವನ್ನು ಅನುಭವಿಸುತ್ತೀರೆಂದು ಹೇಳಿದರು.
ನಂತರ ಸಿಎಒ ಶ್ರೀನಿವಾಸ್ ಮತ್ತು ಕಂಪನಿ ಸೆಕ್ರೆಟರಿ ಕುಲಕರ್ಣಿ ಮತ್ತು ಹಣಕಾಸು ಮುಖ್ಯಸ್ಥ ಮಲಗನ್ ಸೂಪರ್ ಅನಿಯೇಷನ್ ವಿಚಾರವನ್ನು ಕೂಲಂಕುಶವಾಗಿ ಚರ್ಚಿಸಿ ಪ್ರತಿ ಕಾರ್ಮಿಕರಿಗೆ ಅನ್ವಯಿಸುವ ಸೂಪರ್ ಅನಿಯೇಷನ್ ಮಾಹಿತಿಯನ್ನು ಪ್ರಕಟಿಸುವಂತೆ ಬಾಲಚಂದ್ರ ಗುತ್ತಲ್‌ಗೆ ಆದೇಶಿಸಿದರು. ಮನೆ ತೆರವು ವಿಚಾರವನ್ನು ಮುಂದಿನ ದಿನಗಳಲ್ಲಿ ನಡೆಯುವ ಬೋರ್ಡ್ ಮೀಟಿಂಗ್’ನಲ್ಲಿ ಪ್ರಸ್ತಾಪಿಸಿ ಅಪ್ಪಾಜಿರವರ ವಿಚಾರವನ್ನು ಸಭೆಗೆ ಮಂಡಿಸಲಾಗುವುದು ಎಂದು ಅಧಿಕಾರಿಗಳು ಭರವಸೆ ನೀಡಿದರು.
ಸರಕಾರದ ಆದೇಶದಂತೆ ಖಾಸಗೀ ಸಂಸ್ಥೆಗಳು ಯಾವುದು ಮುಂದೆ ಬಾರದ ಕಾರಣದಿಂದ ಕಾರ್ಖಾನೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. ಅದೇ ಸಂದರ್ಭದಲ್ಲಿ ಎಲ್ಲಾ ಕಾರ್ಮಿಕರ ಸಮಸ್ಯೆಯು ಬಗೆಹರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಆ ಸಂದರ್ಭದಲ್ಲಿ ಅನೇಕ ಕಾರ್ಮಿಕರು ವಿರೋಧ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಈ ಕಾರ್ಖಾನೆ ಉಳಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ. 2 ರಿಂದ 3 ಸಾವಿರ ಕೋಟಿ ರೂ. ಬಂಡವಾಳ ತೊಡಗಿಸುವ ಮನಸ್ಸಿದೆ. ಅಧಿಕಾರಿಗಳು ನಮ್ಮೊಂದಿಗೆ ಸಿಎಂ ಬಳಿ ಮಾತುಕತೆಗೆ ಬಂದಲ್ಲಿ ಚರ್ಚಿಸೋಣ ಎಂದು ಭರವಸೆ ನೀಡಿದರು. ಕಂಪನಿ ಸೆಕ್ರೆಟರಿ ಕುಲಕರ್ಣಿ ಮುಂದಿನ ವಾರದಲ್ಲಿ ಭೇಟಿ ಮಾಡೋಣ ಎಂದು ತಿಳಿಸಿದರು. ನಂತರ ಕಾರ್ಮಿಕರ ಎಲ್ಲಾ ಸಮಸ್ಯೆಗಳು ಬಗೆಹರಿಸಲು ಶನಿವಾರದಿಂದಲೇ ಆಡಿಟ್ ಆರಂಭಗೊಳ್ಳಲಿದೆ ಎಂದು ಅಧಿಕಾರಿಗಳು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾರ್ಮಿಕ ಮುಖಂಡರಾದ ಕಮಲಾಕರ, ಶೇಷಪ್ಪ, ಚಂದ್ರಶೇಖರ್, ರಾಜಪ್ಪ, ರವೀಂದ್ರ, ಮೂಡ್ಲಗಿರಿ, ರವಿಕುಮಾರ್, ರಾಮಕೃಷ್ಣ, ಅನಂತಕುಮಾರ್, ಬಿ. ಬಸವರಾಜ್, ಡಿ.ಎಸ್. ಬಸವರಾಜ್, ನಗರಸಭಾ ಸದಸ್ಯರಾದ ಬದರಿನಾರಾಯಣ, ಮಹೇಶ್ ಹಾಗು ಕಾರ್ಮಿಕರ ಮಹಿಳಾ ಕುಟುಂಬ ಸದಸ್ಯರು ಮುಂತಾದವರು ಭಾಗವಹಿಸಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post